ಆಚಾರಿಬೆಟ್ಟು ಶೇಖಬ್ಬ ನಿಧನ
ಪೊಲೀಸ್ ದಾಳಿಯಿಂದ ಆಘಾತಕ್ಕೊಳಗಾಗಿದ್ದರು ಎಂದು ದೂರು ನೀಡಿದ್ದ ಕುಟುಂಬ
ಮಂಗಳೂರು, ಜ.7: ಉಳಾಯಿಬೆಟ್ಟು ಸಮೀಪದ ಆಚಾರಿಬೆಟ್ಟು ನಿವಾಸಿ ಶೇಖಬ್ಬ ಯಾನೆ ಶೇಕುಂಞಿ (65) ಸ್ವಗೃಹದಲ್ಲಿ ನಿಧನರಾದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶೇಖಬ್ಬ ಕೊನೆಯುಸಿರೆಳೆದರು.
ಶೇಖಬ್ಬ ಓರ್ವ ಶ್ರಮಜೀವಿ. ಮನೆಮನೆಗೆ ತೆರಳಿ ಮೀನು ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು. ಮೃತ ಶೇಖಬ್ಬ ಪತ್ನಿ ಹಾಗೂ ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ದೂರು: ‘ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನಾಕಾರರು ಮತ್ತು ಪೊಲೀಸರ ಮಧ್ಯೆ ಡಿ.19ರಂದು ಘರ್ಷಣೆ ನಡೆದಿತ್ತು. ಅಂದು ಸಂಜೆ ಆಸ್ಪತ್ರೆಗೆ ಪೊಲೀಸರು ನುಗ್ಗಿದ್ದರು. ಈ ಹಿಂದೆಯೇ ಆಸ್ಪತ್ರೆಗೆ ದಾಖಲಾಗಿದ್ದ ಶೇಖಬ್ಬ ಅವರು ಪೊಲೀಸರ ದೌರ್ಜನ್ಯದಿಂದ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಗಂಭೀರ ಸ್ಥಿತಿಗೆ ತಲುಪಿದ್ದರು’ ಎಂದು ಅವರ ಸಂಬಂಧಿ ಯೊಬ್ಬರು ಡಿ.27ರಂದು ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಇದರ ಪ್ರತಿ ಈಗ ‘ವಾರ್ತಾಭಾರತಿ’ಗೆ ಲಭ್ಯವಾಗಿದೆ.
‘ಡಿ.16ರಂದು ಅನಾರೋಗ್ಯದಿಂದ ಬಳಲುತ್ತಿದ್ದ ಶೇಖಬ್ಬ ಅವರನ್ನು ನಗರದ ಹೈಲ್ಯಾಂಡ್ ಆಸ್ಪತ್ರೆಯ ನೆಲಮಹಡಿಯ ರೂಂ ನಂ. 104ರಲ್ಲಿ ದಾಖಲಿಸಲಾಗಿತ್ತು. ಬಳಿಕ ಡಿ.19ರಂದು ಮಂಗಳೂರಿನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಗೋಲಿಬಾರ್ ನಡೆದಿತ್ತು. ಕೊಠಡಿಯಲ್ಲಿ ಶೇಖಬ್ಬ, ಸಹೋದರಿಯ ಪುತ್ರ ಸರ್ಫ್ರಾಝ್, ಸಂಬಂಧಿ ಸಫ್ವಾನ್, ಅಬೂಬಕರ್ ಇದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಅಂದು ಸಂಜೆ 6:30ರ ಸುಮಾರಿಗೆ ಗೋಲಿಬಾರ್‌ನಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿತ್ತು. ಈ ಬಗ್ಗೆ ಪಾಂಡೇಶ್ವರ ಠಾಣೆಯ ಇನ್‌ಸ್ಪೆಕ್ಟರ್ ಲೋಕೇಶ್, ಎಸ್ಸೈ ರಾಜೇಂದ್ರ ಹಾಗೂ 20ಕ್ಕೂ ಹೆಚ್ಚು ಪೊಲೀಸರು ಆಸ್ಪತ್ರೆಯ ಹೊರಭಾಗದಲ್ಲಿ ಸೇರಿದ್ದ ಗುಂಪನ್ನು ಚದುರಿಸಲು ನಾವಿದ್ದ ಕೊಠಡಿಯ ಬಾಗಿಲಿಗೆ ಏಕಾಏಕಿ ಬಡಿದು ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದರು. ಇದಕ್ಕೆ ನಾವು ಅವಕಾಶ ನೀಡಿರಲಿಲ್ಲ. ಹೊರಭಾಗದಿಂದ ಪೊಲೀಸರು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ’ ಎಂದೂ ದೂರಿನಲ್ಲಿ ತಿಳಿಸಲಾಗಿದೆ.
‘ಘಟನೆಗೆ ಸಂಬಂಧಿಸಿದಂತೆ ಹೊರಗಿನಿಂದ ವಿನಃ ಕಾರಣ ಅಶ್ರುವಾಯು ಸಿಡಿಸಿದ ಪರಿಣಾಮ ಶೇಖಬ್ಬ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಗಂಭೀರ ಸ್ಥಿತಿಯಲ್ಲಿದ್ದರು. ಪೊಲೀಸ್ ದೌರ್ಜನ್ಯದಿಂದ ಶೇಖಬ್ಬ ತೀವ್ರ ಮಾನಸಿಕವಾಗಿ ನೊಂದಿದ್ದರು. ಘಟನೆಯಿಂದ ಭಯಭೀತಗೊಂಡ ಕಾರಣ ದೂರು ನೀಡಲು ವಿಳಂಬವಾಗಿದೆ. ಪೊಲೀಸರ ಕೃತ್ಯವು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ.







