ಕಾಡಾನೆ ಹಾವಳಿ: ಕೊಡಗಿನಲ್ಲಿ 10 ವರ್ಷಗಳಲ್ಲಿ 77 ಸಾವು

ಮಡಿಕೇರಿ, ಜ.7: ಕೊಡಗು ಜಿಲ್ಲಾದ್ಯಂತ ಕಾಡಾನೆ ಹಾವಳಿ ಮತ್ತೆ ಮಿತಿ ಮೀರಿದೆ. ವೀರಾಜಪೇಟೆ ಹಾಗೂ ಸೋಮವಾರಪೇಟೆ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಕಾಡಾನೆ-ಮಾನವ ಸಂಘರ್ಷ ಸಾಮಾನ್ಯ ಎಂಬಂತಾಗಿದೆ. ಜಿಲ್ಲೆಯ ಜನತೆಗೆ ವರ್ಷದ ಕೂಳು ನೀಡುವ ಕಾಫಿ ಮತ್ತು ಭತ್ತ ಕೊಯ್ಲು ಸಂದರ್ಭದಲ್ಲಿ ಹಾಡಹಗಲೇ ಜನವಸತಿ ಪ್ರದೇಶಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿದ್ದು, 10 ವರ್ಷಗಳಲ್ಲಿ 77 ಮಂದಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಜಿಲ್ಲಾದ್ಯಂತ ಈಗ ಅರೆಬಿಕಾ ಕಾಫಿ ಕೊಯ್ಲು ಕಾರ್ಯ ನಡೆಯುತ್ತಿದ್ದು, ಅತಿವೃಷ್ಟಿ ಎದುರಿಸಿ ಉಳಿದುಕೊಂಡಿರುವ ಕಾಫಿಯನ್ನು ಕಾಡಾನೆ ಹಾವಳಿ ನಡುವೆ ಕೊಯ್ಲು ಮಾಡಲೇಬೇಕಾದ ಅನಿವಾರ್ಯತೆಯಲ್ಲಿ ಬೆಳೆಗಾರರಿದ್ದಾರೆ. ಅದರೊಂದಿಗೆ ಬಹುತೇಕ ಪ್ರದೇಶಗಳಲ್ಲಿ ಭತ್ತ ಕಟಾವು ಕಾರ್ಯವೂ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಡಾನೆಗಳು ದಾಂಧಲೆ ಎಬ್ಬಿಸುತ್ತಿರುವುದು ಬೆಳೆಗಾರರು, ರೈತರು ಮತ್ತು ಕೃಷಿ ಕಾರ್ಮಿಕ ವರ್ಗವನ್ನು ಕಂಗೆಡಿಸಿದೆ. ಕಾಫಿ ತೋಟ, ಭತ್ತದ ಗದ್ದೆಗಳಿಗೆ ಕಾಡಾನೆಗಳು ದಾಳಿ ಇಡುತ್ತಿರುವುದರಿಂದ ಬೆಳೆಗಾರರು, ರೈತರು ತಮ್ಮ ಜಮೀನಿಗೆ ತೆರಳಲು ಭಯಪಡುತ್ತಿದ್ದಾರೆ. ದುಪ್ಪಟ್ಟು ಕೂಲಿ ಕೊಡುತ್ತೇವೆ ಎಂದರೂ ಕಾರ್ಮಿಕರು ಕೆಲಸಕ್ಕೆ ಬರಲು ಒಪ್ಪುತ್ತಿಲ್ಲ. ಕೆಲಸ ಮಾಡುತ್ತಿರುವವರ ಮೇಲೆ ಆನೆಗಳು ಏಕಾಏಕಿ ದಾಳಿ ನಡೆಸಿ ಗಾಯಗೊಳಿಸುತ್ತಿರುವ ಪ್ರಕರಣಗಳು ಕಾರ್ಮಿಕರಿಗೆ ಜೀವಭಯ ಕಾಡುವಂತೆ ಮಾಡಿದೆ. ಹಾಗಾಗಿ ಕಾಫಿ ಕೊಯ್ಲು ಮತ್ತು ಭತ್ತ ಕಟಾವು ಕಾರ್ಯದಲ್ಲಿ ಹಿನ್ನಡೆ ಕಂಡು ಬರುತ್ತಿದೆ. ರಾತ್ರಿ ವೇಳೆಯಲ್ಲಿ ಜನವಸತಿ ಪ್ರದೇಶಗಳಿಗೆ ನುಗ್ಗಿ ರೈತರ ಬೆಳೆಗಳನ್ನು ನಾಶಪಡಿಸಿ ಮತ್ತೆ ಕಾಡಿಗೆ ಮರಳುತ್ತಿದ್ದ ಕಾಡಾನೆಗಳು ಈಗ ಹಗಲಿನಲ್ಲೇ ಕಾಫಿ ತೋಟ, ಹೊಲಗಳಿಗೆ ದಾಳಿ ಇಡುತ್ತಿವೆ. ಕೆಲ ದಿನಗಳ ಹಿಂದೆ ಸಿದ್ದಾಪುರ ಸಮೀಪದ ಇಂಜಿಲಗೆರೆಯಲ್ಲಿ ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಕಾಡಾನೆ ದಾಳಿ ನಡೆಸಿದೆ. ಕೆಲ ಸಮಯದ ಹಿಂದೆ ಅಮ್ಮತ್ತಿ ಸಮೀಪ ಕಾಫಿ ತೋಟದಲ್ಲಿ ಕಾಫಿ ಬೆಳೆಗಾರನ ಮೇಲೆ ಹಗಲಿನ ವೇಳೆಯೇ ಕಾಡಾನೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.
ಕೂಡಿಗೆ ಗ್ರಾಪಂ ವ್ಯಾಪ್ತಿಯ ಮದಲಾಪುರ, ಹುದುಗೂರು, ಬ್ಯಾಡಗೊಟ್ಟ, ಸೀಗೆಹೊಸೂರು, ಹೆಬ್ಬಾಲೆ ಗ್ರಾಪಂ ವ್ಯಾಪ್ತಿಯ ಕಣಿವೆ, ಹುಲುಸೆ ಪ್ರದೇಶದಲ್ಲೂ ಹಗಲಿನಲ್ಲಿ ಕಾಡಾನೆಗಳ ದರ್ಶನ ಸಾಮಾನ್ಯ ಎಂಬಂತಾಗಿದೆ. ಇನ್ನು ದಕ್ಷಿಣ ಕೊಡಗಿನ ಗ್ರಾಮಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕಾಡಾನೆ ಉಪಟಳದಿಂದ ದಕ್ಷಿಣ ಕೊಡಗಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತದ ಬೆಳೆಯುತ್ತಿದ್ದ ಗದ್ದೆಗಳು ಇಂದು ಪಾಳು ಬಿದ್ದಿವೆ. ಒಂದು ಕಾಲದಲ್ಲಿ ಕಣ್ಣು ಹಾಯಿಸಿದಷ್ಟು ದೂರ ಹಚ್ಚ ಹಸುರಿನ ಭತ್ತದ ಪೈರುಗಳಿಂದ ಕಂಗೊಳಿಸುತ್ತಿದ್ದ ಗದ್ದೆಗಳು ಇಂದು ಬರಡು ಭೂಮಿಯಾಗಿ ಗೋಚರಿಸುತ್ತವೆ. ಆನೆ ಹಾವಳಿ ಪ್ರದೇಶಗಳು: ಮಡಿಕೇರಿ ತಾಲೂಕಿನ ಚೇಲಾವರ, ಮದೆನಾಡು, ಸಂಪಾಜೆ, ಕರಿಕೆ ಮತ್ತಿತರ ಪ್ರದೇಶಗಳು ಕಾಡಾನೆ ಹಾವಳಿ ಬಾಧಿತ ಪ್ರದೇಶಗಳೆಂದು ಗುರುತಿಸಲಾಗಿದೆ. ವೀರಾಜಪೇಟೆ ತಾಲೂಕಿನ ಅಮ್ಮತ್ತಿ, ಸಿದ್ದಾಪುರ, ಮಾಲ್ದಾರೆ, ಕಣ್ಣಂಗಾಲ, ಕಳತ್ಮಾಡು, ಗುಹ್ಯ, ಬಾಡಗಬಾಣಂಗಾಲ, ಶ್ರೀಮಂಗಲ, ಕುಟ್ಟ ಹಾಗೂ ನಾಗರಹೊಳೆ ಅಂಚಿನ ಗ್ರಾಮಗಳು, ಸೋಮವಾರಪೇಟೆ ತಾಲೂಕಿನ ಕಟ್ಟೆಪುರ, ನೀರುಗುಂದ, ನಿಲುವಾಗಿಲು, ಬೆಂಬಳೂರು, ಮಾದ್ರೆ, ದುಂಡಲ್ಳಿ, ನಿಡ್ತ, ಎಳನೀರುಗುಂಡಿ, ಹಿತ್ಲುಕೇರಿ, ಮಾಲಂಬಿ, ಕಣಗಾಲು, ದೊಡ್ಡಳ್ಳಿ, ಸಂಗಯ್ಯನಪುರ, ಭುವಂಗಾಲ, ಬಾಣವಾರ, ಗಣಗೂರು, ನೆಲ್ಯಹುದಿಕೇರಿ, ಮದಲಾಪುರ, ಹುದುಗೂರು, ಯಡವನಾಡು ಪ್ರದೇಶಗಳಲ್ಲಿ ವರ್ಷದಿಂದ ವರ್ಷಕ್ಕೆ ಕಾಡಾನೆ ಹಾವಳಿ ಮಿತಿ ಮೀರುತ್ತಿದೆ.
ತೋಟದಲ್ಲೇ ವಾಸ್ತವ್ಯ: ಹಲವು ವರ್ಷಗಳ ಹಿಂದೆಯೇ ಕಾಡಿನಿಂದ ಆಹಾರಕ್ಕಾಗಿ ದೊಡ್ಡದೊಡ್ಡ ಕಾಫಿ ಎಸ್ಟೇಟ್‌ಗಳಿಗೆ ನುಗ್ಗಿರುವ ಕಾಡಾನೆಗಳ ಹಿಂಡುಗಳು ಅಲ್ಲಿಯೇ ನೆಲೆನಿಂತು ಸಂತಾನ ವೃದ್ಧಿ ಮಾಡಿಕೊಂಡಿವೆ. ಇಂತಹ ಆನೆಗಳು ಮರಳಿ ಕಾಡಿನ ಕಡೆ ಮುಖ ಮಾಡದೇ ಇರುವುದರಿಂದ ಅವುಗಳ ಮರಿಗಳೂ ಕಾಫಿ ತೋಟಗಳನ್ನೇ ತಮ್ಮ ಕಾಡುಗಳೆಂದು ನಂಬಿಕೊಂಡು ಬಾಳುತ್ತಿವೆ. ಕಾಫಿ ತೋಟದಲ್ಲಿ ಜನಿಸಿದ ಕಾಡಾನೆಗಳ ಸಂತಾನಗಳನ್ನು ಕಾಡಿಗೆ ಅಟ್ಟಲು ಪ್ರಯತ್ನಿಸಿದರೆ ತಾತ್ಕಾಲಿಕವಾಗಿ ಕಾಡಿನ ಕಡೆ ಮುಖ ಮಾಡಿ ಮತ್ತೆ ತೋಟದೊಳಗೆ ಬೀಡು ಬಿಡುತ್ತವೆ. ಅರಣ್ಯ ಇಲಾಖೆಯ ಸಿಬ್ಬಂದಿ ಬಲ ಪ್ರಯೋಗದಿಂದ ಕಾಡಾನೆಗಳನ್ನು ಓಡಿಸಲು ಪ್ರಯತ್ನಿಸುವ ಸಂದರ್ಭ ರೋಷದಿಂದ ಅವರ ಮೇಲೆ ತಿರುಗಿ ಬಿದ್ದ ಪ್ರಕರಣಗಳೂ ನಡೆದಿವೆ. ಹೀಗಾಗಿ ಜಿಲ್ಲೆಯ ಜನ ಮಾತ್ರವಲ್ಲದೆ ಅರಣ್ಯ ಇಲಾಖೆಯ ಸಿಬ್ಬಂದಿಗೂ ಕಾಡಾನೆಗಳ ಬಗ್ಗೆ ಆತಂಕ ಇದೆ.
ಇದು ವನ್ಯಜೀವಿಗಳಿಗೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಿ ಕಾಡಾನೆ ದಾಳಿಯನ್ನು ತಡೆಗಟ್ಟಲು ಮತ್ತು ದಾಳಿಯಿಂದಾಗುವ ಅನಾಹುತಗಳನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಪರಿಹಾರ ಕಾರ್ಯಗಳಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಂಡು ವೈಜ್ಞಾನಿಕ ರೂಪದ ಹೊಸ ಕ್ರಮಗಳೊಂದಿಗೆ ಮಾನವ ಜೀವಹಾನಿ, ಬೆಳೆನಾಶ ಸೇರಿದಂತೆ ವನ್ಯಜೀವಿಗಳ ಸಾವಿನ ಪ್ರಕರಣಗಳನ್ನೂ ನಿಯಂತ್ರಿಸಬೇಕಾಗಿದೆ ಎಂದು ಪ್ರಕೃತಿ ಪ್ರಿಯರು ಹಾಗೂ ಬೆಳೆಗಾರರು ಒತ್ತಾಯಿಸಿದ್ದಾರೆ.
ಆನೆಗಳೇ ಶತ್ರುಗಳು
ಕೃಷಿ ಪ್ರಧಾನ ಜಿಲ್ಲೆ ಕೊಡಗಿನಲ್ಲಿ ಕಾಡಾನೆಗಳೇ ರೈತರ ಪಾಲಿಗೆ ದೊಡ್ಡ ಶತ್ರುಗಳಾಗಿವೆ. ಆನೆಗಳು ಜನವಸತಿ ಪ್ರದೇಶಕ್ಕೆ ಬಾರದಂತೆ ತಡೆಯುವಲ್ಲಿ ಅರಣ್ಯ ಇಲಾಖೆ ವಿಫವಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಸೋಲಾರ್ ಬೇಲಿ, ನೇತಾಡುವ ಸೋಲಾರ್ ಬೇಲಿ, ಕಂದಕ, ರೈಲ್ವೆ ಕಂಬಿಯ ಬೇಲಿ ಯಾವುದು ಆನೆ ದಾಳಿ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಆನೆಗಳು ಬಂದಾಗ ಜೋರಾಗಿ ಅರಚುವುದು, ಪಟಾಕಿ ಸಿಡಿಸುವುದಷ್ಟೇ ರೈತರ ಪಾಲಿಗೆ ಸದ್ಯದ ಮಟ್ಟಿಗೆ ಇರುವ ಬಹುದೊಡ್ಡ ಪರಿಹಾರೋಪಾಯ ಎನ್ನವಂತಾಗಿದೆ.







