ಅಮೆರಿಕದ ಎಲ್ಲ ಸೈನಿಕರು ‘ಭಯೋತ್ಪಾದಕರು’: ಇರಾನ್ ಸಂಸತ್ತು ಘೋಷಣೆ

ಟೆಹರಾನ್, ಜ. 7: ಅಮೆರಿಕದ ಎಲ್ಲ ಸೈನಿಕರನ್ನು ‘ಭಯೋತ್ಪಾದಕರು’ ಎಂಬುದಾಗಿ ಘೋಷಿಸುವ ಮಸೂದೆಯೊಂದನ್ನು ಇರಾನ್ ಸಂಸತ್ತು ಮಂಗಳವಾರ ಅಂಗೀಕರಿಸಿದೆ.
ಇರಾನ್‌ನ ಸೇನಾ ವಿಭಾಗ ರೆವಲೂಶನರಿ ಗಾರ್ಡ್ಸ್‌ನ ವಿದೇಶಿ ಕಾರ್ಯಾಚರಣೆ ಘಟಕ ಖುದ್ಸ್ ಫೋರ್ಸ್‌ನ ಮುಖ್ಯಸ್ಥ 62 ವರ್ಷದ ಕಾಸಿಮ್ ಸಲೈಮಾನಿ ಕಳೆದ ವಾರ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಮೃತಪಟ್ಟಿರುವುದಕ್ಕೆ ಪ್ರತೀಕಾರವಾಗಿ ಇರಾನ್ ಈ ಕ್ರಮ ತೆಗೆದುಕೊಂಡಿದೆ.
ಹೊಸದಾಗಿ ಅಂಗೀಕಾರಗೊಂಡ ಮಸೂದೆಯು ಅಮೆರಿಕದ ಎಲ್ಲ ಸೈನಿಕರು, ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಮತ್ತು ಅದಕ್ಕೆ ಒಳಪಟ್ಟ ಸಂಸ್ಥೆಗಳ ಉದ್ಯೋಗಿಗಳು, ಏಜಂಟ್‌ಗಳು ಮತ್ತು ಕಮಾಂಡರ್‌ಗಳು ಹಾಗೂ ಸುಲೈಮಾನಿಯ ಹತ್ಯೆಗೆ ಆದೇಶ ನೀಡಿದವರನ್ನು ‘ಭಯೋತ್ಪಾದಕರು’ ಎಂಬುದಾಗಿ ಘೋಷಿಸಿದೆ.
‘‘ಸೇನಾ, ಆರ್ಥಿಕ, ಗುಪ್ತಚರ, ತಾಂತ್ರಿಕ ನೆರವು, ಸೇವೆ ಅಥವಾ ವಸ್ತು ರೂಪದ ನೆರವು ಸೇರಿದಂತೆ ಈ ಪಡೆಗಳಿಗೆ ನೀಡಲಾಗುವ ಯಾವುದೇ ನೆರವನ್ನು ಭಯೋತ್ಪಾದಕ ಕೃತ್ಯಕ್ಕೆ ನೀಡಲಾಗುವ ಸಹಕಾರ ಎಂಬುದಾಗಿ ಪರಿಗಣಿಸಲಾಗುತ್ತದೆ’’ ಎಂದು ಸಂಸತ್ತು ಹೇಳುತ್ತದೆ.
ರಾಜಧಾನಿ ಟೆಹರಾನ್‌ನಲ್ಲಿ ನಡೆದ ಸಭೆಯೊಂದರಲ್ಲಿ ಇರಾನ್ ಸಂಸದರು ತಮ್ಮ ಮುಷ್ಟಿಗಳನ್ನು ಮೇಲೆತ್ತಿ ‘ಅಮೆರಿಕಕ್ಕೆ ಸಾವು ಬರಲಿ’ ಎಂಬ ಘೋಷಣೆಗಳನ್ನು ಕೂಗಿದರು.
ಖುದ್ಸ್ ಫೋರ್ಸ್‌ಗೆ ಹೆಚ್ಚುವರಿಯಾಗಿ 200 ಮಿಲಿಯ ಯುರೋ (ಸುಮಾರು 1,600 ಕೋಟಿ ರೂಪಾಯಿ) ಮೊತ್ತವನ್ನು ಒದಗಿಸಲು ಕೂಡ ಸಂಸದರು ನಿರ್ಧರಿಸಿದರು.







