ರೈ ವಿರುದ್ಧ ನಿಂದನೆಗಿಳಿದರೆ ಪಕ್ಷ ಸುಮ್ಮನಿರದು: ಬೇಬಿ ಕುಂದರ್

ಬಂಟ್ವಾಳ, ಜ. 7: ಕ್ಷೇತ್ರದೊಳಗಿನ ರಾಜಕೀಯ ವಿಚಾರಕ್ಕೆ ಸಂಬಂಧಿಸಿ ಹರಿಕೃಷ್ಣ ಬಂಟ್ವಾಳರಂತಹ ವ್ಯಕ್ತಿಗಳ ಮೂಲಕ ಮಾಜಿ ಸಚಿವರನ್ನು ಹೀನಾಯವಾಗಿ ನಿಂದಿಸುವುದು ಸೌಮ್ಯ ಸ್ವಭಾವದ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಶೋಭೆ ತರುವುದಿಲ್ಲ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ತಿಳಿಸಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಬಿ.ರಮಾನಾಥ ರೈ ಅವರು ಬಂಟ್ವಾಳ ಕ್ಷೇತ್ರದಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯ ಕುರಿತು ರಾಜಕೀಯ ಚರ್ಚೆ ನಡೆಸಿ, ಆದರೆ, ವೈಯಕ್ತಿಕ ನಿಂದನೆಗಿಳಿದರೆ ಪಕ್ಷ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್ ಅವರು ರಮಾನಾಥ ರೈ ಅವರನ್ನು ವೈಯಕ್ತಿಕ ನೆಲೆಯಲ್ಲಿ ಟೀಕಿಸುತ್ತಿದ್ದು, ಇದು ಸಹಿಸಲಸಾಧ್ಯ ವಿಚಾರ. ಇಂಥವರು ಸೌಮ್ಯ ಸ್ವಭಾವದವರಾದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಾರೆ. 2017-18ರಲ್ಲಿ ರಸ್ತೆಗಳು ಅಭಿವೃದ್ಧಿ ಕಾಮಗಾರಿಗೆ ಪತ್ರ ಬರೆದಿರುವ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಮಾಜಿ ಸಚಿವ ಬಿ.ರಮಾನಾಥ ರೈ ಅವರು 2013ರಿಂದ 2018ರ ವರೆಗೆ ಎರಡು ಸಾವಿರ ಕೋಟಿಗಿಂತಲೂ ಅಧಿಕ ಅನುದಾನ ತಂದು ಅಭಿವೃದ್ಧಿ ಯೋಜನೆ ಮಾಡಿದ್ದರೆ, ಇದೀಗ ಕ್ಷೇತ್ರ ಬಡವಾಗಿದೆ. ಶಾಸಕ ರಾಜೇಶ್ ನಾಯ್ಕ್ ವೈಫಲ್ಯವೇ ಸರಿ ಎಂದರು.
ಬಂಟ್ವಾಳ ನಗರ ಸೌಂದರ್ಯವೃದ್ಧಿ ಕೆಲಸ ಯಾವಾಗ ಆರಂಭಿಸಲಾಗುತ್ತದೆ ಎಂದು ಪ್ರಶ್ನಿಸಿದ ಅವರು, ಮೂಲರಪಟ್ಣ ಸೇತುವೆ ಸಹಿತ ಹಲವು ವಿಚಾರಗಳಲ್ಲಿ ರಮಾನಾಥ ರೈ ಇದ್ದರೆ ಬೇಗ ಕೆಲಸವಾಗುತ್ತಿತ್ತು ಎಂದು ಜನರಾಡಿಕೊಳ್ಳುತ್ತಿದದ್ದಾರೆ ಎಂದರು. ಸಚಿವ ರೇವಣ್ಣ ಅವರಿಗೆ ರಮಾನಾಥ ರೈ ಪತ್ರ ಬರೆದದ್ದಕ್ಕೆ ದಾಖಲೆಗಳಿವೆ ಎಂದ ಬೇಬಿ ಕುಂದರ್ ಹೇಳಿದರು.
ಜಿಪಂ ಸದಸ್ಯ ಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ, ಗ್ರಾಮ ಪಂಚಾಯತ್ ಸದಸ್ಯನಾಗಲು ಯೋಗ್ಯತೆಯಿಲ್ಲದ ಹರಿಕೃಷ್ಣ ಬಂಟ್ವಾಳರಿಗೆ ರಮಾನಾಥ ರೈ, ಧರ್ಮಸ್ಥಳದ ಹಾಗೂ ಪಕ್ಷದ ಬಗ್ಗೆ ನೈತಿಕತೆಯಿಲ್ಲ. ಅಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‍ರನ್ನು ನಿಂದಿಸಿದಕ್ಕೆ ಬಿಜೆಪಿಯವರು ಪಕ್ಷದಿಂದ ಉಚ್ಛಾಟನೆ ಮಾಡಿದ್ದು ಎಲ್ಲರಿಗೂ ತಿಳಿದಿದೆ. ಜನಾರ್ಧನ ಪೂಜಾರಿ ಅವರು ನಾಲ್ಕು ಬಾರಿ ಸೋಲಿನ ಹಿಂದೆ ಹರಿಕೃಷ್ಣ ಬಂಟ್ವಾಳರ ಕೈವಾಡವಿದೆ ಎಂದು ಆರೋಪಿಸಿದ ಅವರು, ರಾಜಕೀಯ ವಾಗಿ ಚರ್ಚೆಗೆ ಬರಲಿ. ವಿನಾಕಾರಣ ವೈಯಕ್ತಿಕ ನಿಂದನೆ ಸರಿಯಲ್ಲ, ರೈ ಅವರನ್ನು ವೈಯಕ್ತಿಕವಾಗಿ ನಿಂದಿಸಿರುವುದು ಬಹಳ ನೋವಾಗಿದೆ. ಸಮಯ ಬಂದಾಗ ಹರಿಕೃಷ್ಣ ಅವರ ಚರಿತ್ರೆಯನ್ನು ನಾವು ಬಹಿರಂಗ ಪಡಿಸುತ್ತೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮಹಮ್ಮದ್, ಪದ್ಮಶೇಖರ ಜೈನ್, ಮಂಜುಳಾ ಮಾಧವ ಮಾವೆ, ಬಿ.ಎಂ.ಅಬ್ಬಾಸ್ ಅಲಿ, ಸುದೀಪ್ ಕುಮಾರ ಶೆಟ್ಟಿ, ಸದಾಶಿವ ಬಂಗೇರ, ಮಾಯಿಲಪ್ಪ ಸಾಲಿಯಾನ್, ಜಗದೀಶ ಕೊಯ್ಲ, ಜನಾರ್ದನ ಚಂಡ್ತಿಮಾರ್ ಹಾಜರಿದ್ದರು.







