ಜೆಡಿಎಸ್‌ಗೆ ಭವಿಷ್ಯವಿಲ್ಲ: ಎಚ್.ವಿಶ್ವನಾಥ್

ಬೆಂಗಳೂರು, ಜ.7: ಜೆಡಿಎಸ್ ಪಕ್ಷ ಕಟ್ಟುವಲ್ಲಿ ಎಚ್.ಡಿ ಕುಮಾರಸ್ವಾಮಿ ಅವರ ಯಾವುದೇ ಪಾತ್ರವಿಲ್ಲ. ದೇವೇಗೌಡರೇ ಏಕಾಂಗಿಯಾಗಿ ಪಕ್ಷ ಕಟ್ಟಿದ್ದಾರೆ. ಜೆಡಿಎಸ್‌ನಲ್ಲಿ ಯಾವುದೇ ಭವಿಷ್ಯವಿಲ್ಲ, ಹೀಗಾಗಿ ಹಲವು ಶಾಸಕರು ಜೆಡಿಎಸ್‌ನಿಂದ ಬೇರೆ ಪಕ್ಷಕ್ಕೆ ಹೋಗಿದ್ದಾರೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ನೀಡುವುದು ಬಿಜೆಪಿ ಹೈಕಮಾಂಡ್‌ಗೆ ಬಿಟ್ಟ ವಿಚಾರ. ರಾಜ್ಯದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಏಕೈಕ ನಾಯಕ ಅಂದರೆ ಅದು ಬಿ.ಎಸ್ ಯಡಿಯೂರಪ್ಪ ಅವರು. ಅವರ ಮೇಲೆ ನಮಗೆ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಚ್.ಡಿ ಕುಮಾರಸ್ವಾಮಿ ಅವರ ಬಿಜೆಪಿಯ 30 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಮಾತನ್ನು ನಾನು ನಂಬುವುದಿಲ್ಲ. ಈ ವಿಚಾರ ಸತ್ಯಕ್ಕೆ ದೂರವಾದುದು. ಅವರ ಜೊತೆ ಯಾವ ಬಿಜೆಪಿ ಶಾಸಕರು ಸಂಪರ್ಕದಲ್ಲಿಲ್ಲ ಎಂದರು.
ಜನ ವಿರೋಧಿ ಸರಕಾರದಲ್ಲಿ ಪ್ರಜಾಪ್ರಭುತ್ವ ಸಿಲುಕಿ ನರಳುತ್ತಿರುವುದನ್ನು ಬಿಡುಗಡೆಗೊಳಿಸಲು ನಾವು 17 ಶಾಸಕರು ರಾಜೀನಾಮೆ ಕೊಟ್ಟಿದ್ದೇವೆ ಹೊರತು ಯಾವುದೇ ಆಧಿಕಾರದ ಆಸೆಯಿಂದ ಅಲ್ಲ ಎಂದು ಹೇಳಿದರು.







