ವಿಷಯ ತಜ್ಞರ ಬಗ್ಗೆ ಅರ್ಜಿದಾರರ ಆಕ್ಷೇಪ: ಹೈಕೋರ್ಟ್ ಅಸಮಾಧಾನ
ಕೆ.ಸಿ.ವ್ಯಾಲಿ ಯೋಜನೆ ವಿರುದ್ಧ ಪಿಐಎಲ್
ಬೆಂಗಳೂರು, ಜ.7: ಕೆ.ಸಿ.ವ್ಯಾಲಿಯ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ತುಂಬಿಸದಂತೆ ನಿರ್ದೇಶನ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಸರಕಾರ ನೇಮಿಸಿದ ವಿಷಯ ತಜ್ಞರು ಹಾಗೂ ವಿಜ್ಞಾನಿಗಳ ಸಮಿತಿಯ ಸದಸ್ಯರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ನಿಲುವಿಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಚಿಕ್ಕಬಳ್ಳಾಪುರ ತಾಲೂಕಿನ ಪಟ್ರೇನಹಳ್ಳಿಯ ಆರ್.ಆಂಜನೇಯರೆಡ್ಡಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು.
ಕೆ.ಸಿ.ವ್ಯಾಲಿ ಯೋಜನೆ ಪರಿಸರ ದುಷ್ಪರಿಣಾಮ ಅಧ್ಯಯನಕ್ಕೆ ನೇಮಿಸಿರುವ ವಿಷಯ ತಜ್ಞರು ಹಾಗೂ ವಿಜ್ಞಾನಿಗಳ ಸಮಿತಿಯ ಕೆಲ ಸದಸ್ಯರು ಮೂಲ ಯೋಜನೆ ಸಿದ್ಧಪಡಿಸಿದ್ದಾರೆ ಎಂದು ಅರ್ಜಿದಾರರು ಆಕ್ಷೇಪಿಸಿದಾಗ ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ನ್ಯಾಯಪೀಠವು ವಿಷಯ ತಜ್ಞರು ಸಾಮಾನ್ಯ ಜನರಲ್ಲ. ಸಮಿತಿಯಲ್ಲಿ ಯಾರೂ ಸದಸ್ಯರಾಗಿರಬೇಕೆಂದು ಸರಕಾರಕ್ಕೆ ನೀವು ಸೂಚಿಸಲು ಸಾಧ್ಯವಿಲ್ಲ ಎಂದು ಅರ್ಜಿದಾರರ ವಿರುದ್ಧ ಬೇಸರ ವ್ಯಕ್ತಪಡಿಸಿತು.
ನೀವು ವೌಖಿಕವಾಗಿ ವ್ಯಕ್ತಪಡಿಸಿರುವ ಆಕ್ಷೇಪಣೆಯನ್ನು ಪ್ರಮಾಣ ಪತ್ರದ ಮೂಲಕ ಪೀಠಕ್ಕೆ ಸಲ್ಲಿಸಬೇಕೆಂದು ಅರ್ಜಿದಾರರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.





