ಕರಡು ಮತದಾರರ ಪಟ್ಟಿಯ ಬಗ್ಗೆ ದೂರು, ಆಕ್ಷೇಪಣೆಗೆ ಜ.15ರವರೆಗೆ ಕಾಲಾವಕಾಶ
‘ಮಿಂಚಿನ ನೋಂದಣಿ’ಗೆ ಜ.8ರಂದು ಕೊನೆ ದಿನ

ಬೆಂಗಳೂರು, ಜ.7: ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಲ್ಲಿ ‘ಯಾವುದೇ ಮತದಾರರು ಮತದಾನದಿಂದ ಹೊರಗುಳಿಯಬಾರದು’ ಎಂಬ ಧ್ಯೇಯ ವಾಕ್ಯದೊಂದಿಗೆ ಜ.6, 7 ಮತ್ತು 8ರಂದು ಮಿಂಚಿನ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಕರಡು ಮತದಾರರ ಪಟ್ಟಿಯಲ್ಲಿ ಇನ್ನೂ ಸೇರ್ಪಡೆಯಾಗದೆ ಇರುವ ಅರ್ಹ ಯುವಕ-ಯುವತಿಯರು, ನಾಗರಿಕರು ಹೆಸರು ನೋಂದಾಯಿಸಬಹುದಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಅವರು ಸ್ಥಳಾಂತರ ಹೊಂದಿದಲ್ಲಿ, ಮೃತ ಹೊಂದಿದಲ್ಲಿ, ಹೆಸರು ಪುನರಾವರ್ತನೆಯಾಗಿದ್ದಲ್ಲಿ ಹೆಸರನ್ನು ತೆಗೆದು ಹಾಕಲು ನಮೂನೆ-7ರಲ್ಲಿ, ಹೆಸರು ಇತ್ಯಾದಿ ತಿದ್ದುಪಡಿ ಬಯಸಿದ್ದಲ್ಲಿ ನಮೂನೆ-8ರಲ್ಲಿ ಮತ್ತು ಹೆಸರು ವರ್ಗಾವಣೆ ಮಾಡಬೇಕಾದಲ್ಲಿ ನಮೂನೆ-8ಎ ರಲ್ಲಿ ಸೂಕ್ತ ದಾಖಲೆಯೊಂದಿಗೆ ಅರ್ಜಿಗಳನ್ನು ಸಂಬಂಧಪಟ್ಟ ಮತಗಟ್ಟೆ ಅಧಿಕಾರಿ(ಬಿ.ಎಲ್.ಒ)ಗಳಿಗೆ ಸಲ್ಲಿಸಬಹುದು ಎಂದು ತಿಳಿಸಿದರು.
ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ಮತ್ತು ಪಟ್ಟಿಯಿಂದ ಹೆಸರನ್ನು ತೆಗೆಯಲು ಅರ್ಜಿಯನ್ನು ಮತದಾರರು ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿ ಅವರ ಕಚೇರಿ ವಿಎಫ್‌ಸಿ ಕೇಂದ್ರಗಳಲ್ಲಿ, ಬಿಬಿಎಂಪಿ ವಾರ್ಡ್ ಕಚೇರಿಗಳಲ್ಲಿ, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಸಹ ಅರ್ಜಿಯನ್ನು ಪಡೆದು ಸಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕರಡು ಮತದಾರರ ಪಟ್ಟಿಯನ್ನು ಅರ್ಹತಾ ದಿನಾಂಕ 1ನೇ ಜನವರಿ 2020ರಂತೆ ಪ್ರಕಟಿಸಿದ್ದು, ಕರಡು ಮತದಾರರ ಪಟ್ಟಿಯ ಬಗ್ಗೆ ಯಾವುದೇ ದೂರು, ಆಕ್ಷೇಪಣೆಗಳಿದ್ದಲ್ಲಿ ಜ.15ರ ವರೆಗೆ ಸಲ್ಲಿಸಬಹುದು. ಅಲ್ಲದೆ, ಜ.15ರ ವರೆಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು. ಸಾರ್ವಜನಿಕರು ವೋಟರ್ಸ್ ಹೆಲ್ಪ್ ಲೈನ್ ಆ್ಯಪ್ ಎನ್‌ವಿಎಸ್‌ಪಿ ಫೋರ್ಟಲ್‌ಗಳಲ್ಲೂ ಸಹ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಸಾರ್ವಜನಿಕರು ತಮ್ಮ ಮತದಾರರ ಗುರುತಿನ ಚೀಟಿಯ ಮಾಹಿತಿಯನ್ನು (wwwceokarnataka.kar.nic.in) ಅಂತರ್ಜಾಲ ತಾಣದಲ್ಲಿ ಪರಿಶೀಲಿಸಬಹುದಾಗಿದೆ ಎಂದು ತಿಳಿಸಿದರು.
ನೋಂದಣಿಗೆ ಬೇಕಾಗುವ ದಾಖಲೆ: ಹೊಸದಾಗಿ ಹೆಸರು ಸೇರಿಸುವವರು ಜನನ ಪ್ರಮಾಣ ಪತ್ರ ಅಥವಾ ಎಸೆಸೆಲ್ಸಿ ಮಾರ್ಕ್ಸ್ ಕಾರ್ಡ್, ಫಾಸ್‌ಪೋರ್ಟ್ ಸೈಜ್ ಫೋಟೊ ಹಾಗೂ ವಿಳಾಸಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು. ತಿದ್ದುಪಡಿ ಅಥವಾ ವರ್ಗಾವಣೆ ಸಂಬಂಧಿಸಿದಂತೆ ಭಾರತ ಚುನಾವಣಾ ಆಯೋಗದ ನಿರ್ದೇಶನದನುಸಾರ ಅಗತ್ಯವಾದ ಪೂರಕ ದಾಖಲೆ ನೀಡಬೇಕು.







