ಜೆಎನ್‌ಯುಗೆ ದೀಪಿಕಾ ಪಡುಕೋಣೆ ಭೇಟಿ: ಚಿತ್ರ ಬಹಿಷ್ಕರಿಸಲು ಕರೆ ನೀಡಿದ ಬಿಜೆಪಿ ನಾಯಕ
ಟ್ವಿಟರ್ ನಲ್ಲಿ ಪರ, ವಿರೋಧ

ಹೊಸದಿಲ್ಲಿ, ಜ.8: ದಿಲ್ಲಿ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ(ಜೆಎನ್‌ಯು)ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಮೇಲೆ ಮುಸುಕುಧಾರಿ ಗೂಂಡಾಗಳು ದಾಳಿ ನಡೆಸಿದ ಎರಡು ದಿನಗಳ ಬಳಿಕ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್‌ಯು ಕ್ಯಾಂಪಸ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಒಗ್ಗಟ್ಟು ಪ್ರದರ್ಶಿಸಿದರು. ಮಂಗಳವಾರ ಸಂಜೆ ದೀಪಿಕಾ ಅವರ ಜೆಎನ್‌ಯು ಭೇಟಿ ಕಾರ್ಯಕ್ರಮ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಅಭಿಪ್ರಾಯಕ್ಕೆ ಕಾರಣವಾಯಿತು. 'ಸಪೋರ್ಟ್ ದೀಪಿಕಾ' ಹಾಗೂ 'ಬಾಯ್ಕಟ್ ‘ಚಪಾಕ್’ ನಿಂದ 'ಶೇಮ್ ಬಾಲಿವುಡ್' ತನಕ ಟ್ರೆಂಡ್ ಗಳು ಆರಂಭವಾಗಿವೆ.
ತನ್ನದೇ ನಟನೆ ಹಾಗೂ ನಿರ್ಮಾಣದ ಹೊಸ ಚಿತ್ರ ‘ಚಪಾಕ್’ ಪ್ರಚಾರಕ್ಕಾಗಿ ದಿಲ್ಲಿಯಲ್ಲಿದ್ದ ದೀಪಿಕಾ ಜೆಎನ್‌ಯುಗೆ ಭೇಟಿ ನೀಡಿ ದಾಳಿಗೊಳಗಾದ ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ನಾಯಕಿ ಐಷ್ ಘೋಷ್ ಸಹಿತ ಹಲವು ವಿದ್ಯಾರ್ಥಿಗಳೊಂದಿಗೆ ವೌನವಾಗಿ ನಿಂತು ಅವರಿಗೆ ನೈತಿಕ ಸ್ಥೈರ್ಯ ತುಂಬಿದ್ದರು. ಚಿತ್ರ ನಿರ್ಮಾಪಕರಾದ ಅನುರಾಗ್ ಕಶ್ಯಪ್ ಹಾಗೂ ನಿಖಿಲ್ ಅಡ್ವಾಣಿ,ತಾನು ಮೊದಲ ಬಾರಿ ನಿರ್ಮಿಸುತ್ತಿರುವ ಚಿತ್ರವೊಂದರ ಪ್ರಚಾರದ ವೇಳೆ ಜೆಎನ್‌ಯುಗೆ ಭೇಟಿ ನೀಡುವ ನಿರ್ಧಾರ ಕೈಗೊಂಡಿರುವ ದೀಪಿಕಾರನ್ನು ಪ್ರಶಂಸಿಸಿದ್ದಾರೆ.
ದೀಪಿಕಾ ಜೆಎನ್‌ಯುಗೆ ಭೇಟಿ ನೀಡಿದ ಫೋಟೊವನ್ನು ಟ್ವಿಟರ್‌ನಲ್ಲಿ ಹಾಕಿರುವ ಬಿಜೆಪಿ ವಕ್ತಾರ ತೇಜಿಂದರ್ ಪಾಲ್ ಸಿಂಗ್, ಶುಕ್ರವಾರ ಬಿಡುಗಡೆಯಾಗಲಿರುವ ದೀಪಿಕಾರ ಹೊಸ ಚಿತ್ರವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ. ಬಿಜೆಪಿ ನಾಯಕ ಸಿಂಗ್ ಟ್ವೀಟ್‌ಗೆ ಹಲವರು ಟೀಕಿಸಿದ್ದಾರೆ. ‘ಚಪಾಕ್ ದೇಖೊ,ತಪಾಕ್ ಸೇ ಸಪೋರ್ಟ್ ದೀಪಿಕಾ’ಎಂಬ ಹ್ಯಾಶ್‌ಟ್ಯಾಗ್‌ನ್ನು ಹಲವು ಟ್ವೀಟ್ ಬಳಕೆದಾರರು ಬಳಸಿದ್ದಾರೆ.







