ಜ.11ರ ಬಿಲ್ಲವ -ಮುಸ್ಲಿಮ್ ಸ್ನೇಹ ಸಮಾವೇಶ ಮುಂದೂಡಿಕೆ
ಸ್ವಾರ್ಥ ಹಿತಾಸಕ್ತಿಗಾಗಿ ಕೀಳುಮಟ್ಟದ ಕುತಂತ್ರ, ಗೊಂದಲ ಸೃಷ್ಟಿ : ಸೊರಕೆ

ಉಡುಪಿ, ಜ. 8: ಉಡುಪಿ ಪುರಭವನದಲ್ಲಿ ಜ.11ರಂದು ನಡೆಸಲು ಉದ್ದೇಶಿಸಿದ್ದ ಬಿಲ್ಲವ ಮುಸ್ಲಿಮ್ ಸ್ನೇಹ ಸಮಾವೇಶದ ಬಗ್ಗೆ ಕೆಲವರು ಗೊಂದಲ ಸೃಷ್ಟಿಸುವ ಪ್ರಯತ್ನದಲ್ಲಿದ್ದು, ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಸಮಾಜ ಮತ್ತು ಸಮುದಾಯದ ಒಳಿತನ್ನು ಬಲಿಕೊಟ್ಟು ಕೀಳುಮಟ್ಟದ ಕುತಂತ್ರಗಳನ್ನು ನಡೆಸುತ್ತಿದ್ದಾರೆ. ಇಂತಹ ಗೊಂದಲದ ಪರಿಸ್ಥಿತಿಯಲ್ಲಿ ಈ ಸಮಾವೇಶವನ್ನು ಸದ್ಯ ಮುಂದೂಡುವ ಬಗ್ಗೆ ಸ್ವಾಗತ ಸಮಿತಿ ನಿರ್ಧರಿಸಿದೆ ಎಂದು ಸಮಿತಿಯ ಅಧ್ಯಕ್ಷ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.
ಉಡುಪಿಯ ಪುರಭವನದ ಮಿನಿ ಹಾಲ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸೊರಕೆ, ಈ ವಿಚಾರದಲ್ಲಿ ಅನಗತ್ಯವಾಗಿ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಿಸಿ ಶುದ್ಧ ಸುಳ್ಳುಗಳನ್ನು ಪಸರಿಸುತ್ತಿದ್ದಾರೆ. ಸಮಿತಿಯ ಸದಸ್ಯರು ಮತ್ತು ಅತಿಥಿಗಳ ಬಗ್ಗೆ ಕೀಳುಮಟ್ಟದ ಅಸಹನೀಯ ಭಾಷೆಯನ್ನು ಬಳಸಿ ಅಪಪ್ರಚಾರ ಮಾಡುತ್ತಿರುವುದಲ್ಲದೇ ಈ ಸಮಾವೇಶ ದಿಂದ ಹಿಂದೆ ಸರಿಯುವಂತೆ ಮಾನಸಿಕ ಒತ್ತಡ ಮತ್ತು ದೈಹಿಕ ಹಲ್ಲೆ ನಡೆಸುವ ಬೆದರಿಕೆಯನ್ನು ಒಡ್ಡುತ್ತಿದ್ದಾರೆ ಎಂದು ದೂರಿದರು.
ಈ ಕಾರಣಗಳಿಂದ ಸ್ವಾಗತ ಸಮಿತಿಯ ಒಂದಿಬ್ಬರು ಹಿಂದೆ ಸರಿದ್ದಿದ್ದು, ಉದ್ಘಾಟಕರಾಗಿ ಬರಬೇಕಾಗಿದ್ದ ಸಚಿವ ಶ್ರೀನಿವಾಸ ಪೂಜಾರಿ, ಸಮಾವೇಶದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಆದುದರಿಂದ ಈ ಸಮಾವೇಶವನ್ನು ನಡೆಸುವುದು ಸೂಕ್ತವಲ್ಲವೆಂದು ನಿರ್ಣಯ ತೆಗೆದುಕೊಳ್ಳಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಸಭೆ ನಡೆಸಿ ಸಮಾನ ಮಸ್ಕರನ್ನು ಒಳಗೊಂಡ ಸಮಿತಿ ರಚಿಸಿ ಅದರ ಮೂಲಕ ದಿನಾಂಕ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.
'ಭಿನ್ನ ಧ್ವನಿಯೇ ಇರಲಿಲ್ಲ'
ಸಮಾಜದಲ್ಲಿ ಶಾಂತಿ-ಸೌಹಾರ್ದ ಸ್ಥಾಪಿಸುವ ಉದ್ದೇಶದೊಂದಿಗೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ಸ್ನೇಹ ಸಮಾವೇಶವನ್ನು ನಡೆಸಲು ಬಿಲ್ಲವ ಸಮುದಾಯದೊಂದಿಗೆ ಅ.30ರಂದು ಸಮಾಲೋಚನಾ ಸಭೆಯನ್ನು ನಡೆಸಿತ್ತು. ಅದರಲ್ಲಿ ನಾನು ಸಹಿತ ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ, ಜಿಪಂ ಸದಸ್ಯ ಜನಾರ್ದನ ತೋನ್ಸೆ, ಮಾಜಿ ಜಿಪಂ ಅಧ್ಯಕ್ಷರಾದ ಕಟಪಾಡಿ ಶಂಕರ ಪೂಜಾರಿ, ರಾಜು ಪೂಜಾರಿ, ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಡಿ.ಆರ್.ರಾಜು ಸೇರಿದಂತೆ ವಿವಿಧ ಬಿಲ್ಲವ ಸಂಘಟನೆಗಳ ಸುಮಾರು 70 ಪ್ರತಿನಿಧಿಗಳು ಭಾಗವಹಿಸಿದ್ದರು.
ಇದಕ್ಕೆ ಸಭೆಯಲ್ಲಿ ಒಕ್ಕೊರಲ ಸಮ್ಮತಿಯನ್ನು ಸೂಚಿಸಲಾಯಿತು. ಸಭೆಯಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಂತರ ಪ್ರತಿಯೊಂದು ತಾಲೂಕುಗಳಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಯಿತು. ಪ್ರತಿ ಸಭೆಯಲ್ಲಿ 100-300 ಮಂದಿ ಬಿಲ್ಲವ ಸಮಾಜದ ವಿವಿಧ ಸ್ಥರದ ಪ್ರತಿನಿಧಿಗಳು ಭಾಗವಹಿಸಿದ್ದರು. ಆ ಸಭೆಗಳಲ್ಲಿ ಒಂದೇ ಒಂದು ಭಿನ್ನ ಧ್ವನಿಯಿಲ್ಲದೇ ಸರ್ವಾನುಮತದಿಂದ ಈ ಸಮಾವೇಶದ ಉದ್ದೇಶಗಳನ್ನು ಉಪಸ್ಥಿತರಿದ್ದ ಎಲ್ಲರೂ ಸ್ವಾಗತಿಸಿದರು ಎಂದು ಸೊರಕೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ, ಜಿಪಂ ಸದಸ್ಯ ಜನಾರ್ದನ ತೋನ್ಸೆ, ಬಿಲ್ಲವ ಮುಖಂಡರಾದ ನವೀನ್ ಚಂದ್ರ ಸುವರ್ಣ ಅಡ್ವೆ, ರಾಜರಾಮ್ ಸಾಸ್ತಾನ, ಸುಧೀರ್ ಕುಮಾರ್, ಶ್ರೀಕರ ಅಂಚನ್, ಸುಧಾಕರ ಕಲ್ಮಾಡಿ, ಸುಭೀತ್ ಕಾರ್ಕಳ, ತಿಮ್ಮ ಪೂಜಾರಿ ಕೋಟ, ಆನಂದ ಪೂಜಾರಿ ಬನ್ನಂಜೆ, ದಿನಕರ ಹೇರೂರು, ಒಕ್ಕೂಟದ ಇದ್ರೀಸ್ ಹೂಡೆ, ಮುಹಮ್ಮದ್ ಮೌಲಾ, ಶಬೀ ಅಹ್ಮದ್ ಖಾಝಿ, ಇಬ್ರಾಹಿಂ ಕೋಟ, ರಫೀಕ್ ಬಿಎಸ್‌ಎಫ್, ಮುಹಮ್ಮದ್ ಗೌಸ್, ಜಫರುಲ್ಲಾ ಹೂಡೆ, ಇಕ್ಬಾಲ್ ಕಟಪಾಡಿ ಮೊದಲಾದವರು ಹಾಜರಿದ್ದರು.
‘ಕೋಟ ಒಪ್ಪಿಗೆಯಂತೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು’
ಈ ಸಮಾವೇಶವನ್ನು ಉದ್ಘಾಟಿಸಲಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಆಮಂತ್ರಣ ಕುರಿತ ವದಂತಿಗಳು ಶುದ್ಧ ಸುಳ್ಳು ಆಗಿದ್ದು, ಅವರ ಒಪ್ಪಿಗೆ ಪಡೆದ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಸೇರಿಲಾಗಿದೆ. ಆದರೂ ಅವರು ನೀಡಿದ ಹೇಳಿಕೆ ಹಿಂದೆ ಒತ್ತಡಗಳು ಇರುವುದು ನಮಗೆ ಅರ್ಥ ಆಗುತ್ತದೆ ಎಂದು ವಿನಯ ಕುಮಾರ್ ಸೊರಕೆ ತಿಳಿಸಿದರು.
ಸಚಿವರನ್ನು ಕನಿಷ್ಠ ಮೂರು ಬಾರಿ ಸಂಪರ್ಕಿಸಿ, ಅವರ ಒಪ್ಪಿಗೆ ಪಡೆದು, ಅನಂತರ ಕೆಲವೇ ಕೆಲವು ಆಮಂತ್ರಣ ಪತ್ರಿಕೆಯ ಪ್ರತಿಗಳನ್ನು ಮುದ್ರಿಸಿ ನಿಯೋಗವೊಂದರ ಮೂಲಕ ಅವರನ್ನು ಭೇಟಿ ಮಾಡಿ ವಿದ್ಯುಕ್ತವಾಗಿ ಆಮಂತ್ರಿಸಲಾಗಿತ್ತು. ಅದನ್ನು ಅವರು ಸಂತೋಷದಿಂದ ಒಪ್ಪಿಕೊಂಡರು. ಅವರಿಗೆ ಮಾಹಿತಿ ನೀಡದೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಲಾಗಿದೆ ಎಂದು ಹೇಳಿರುವುದು ಸತ್ಯವಲ್ಲ ಎಂದರು.
ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರನ್ನು ಖುದ್ದು ನಾನೇ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ಆದರೆ ಅವರು ನಾನು ಕೋಟ ಶ್ರೀನಿವಾಸ ಪೂಜಾರಿ ಜೊತೆ ಚರ್ಚಿಸಿ ಹೇಳುವುದಾಗಿ ತಿಳಿಸಿದ್ದರು. ಆದರೆ ನಂತರ ಅವರು ಸಂಪರ್ಕ ಮಾಡಿಲ್ಲ. ಹಾಗಾಗಿ ಅವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ನಾವು ಹಾಕಿಲ್ಲ ಎಂದು ಅವರು ಹೇಳಿದರು.
ಅದೇ ರೀತಿ ವೇದಿಕೆಗೆ ಸಾಸ್ತಾನ ಚಂದು ಪೂಜಾರಿ ಅವರ ಹೆಸರಿಡುವ ಬಗ್ಗೆ ಅವರ ಮಕ್ಕಳಾದ ಮಾಜಿ ಶಾಸಕ ಬಸವರಾಜ, ದೇವಾನಂದ, ರಾಜಾರಾಮ್ ಗಮನಕ್ಕೆ ತಂದಿದ್ದು, ಅವರು ಸಂತೋಷದಿಂದ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಈ ಮಧ್ಯೆ ವಿರೋಧಿಗಳು ಚಂದು ಪೂಜಾರಿ ಅವರ ಮೊಮ್ಮಗನನ್ನು ಬಳಸಿಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಅವರು ದೂರಿದರು.
‘ಈ ಸಮಾವೇಶದಲ್ಲಿ ರಾಜಕೀಯ ಉದ್ದೇಶ ಮಾಡುವುದಾದರೆ ಉದ್ಘಾಟನೆಗೆ ಕೋಟ ಶ್ರೀನಿವಾಸ ಪೂಜಾರಿಯನ್ನು ನಾವು ಆಹ್ವಾನಿಸುತ್ತಿರಲಿಲ್ಲ. ಆರಂಭದಲ್ಲಿ ಕರೆದ ಸಮಾಲೋಚನಾ ಸಭೆಯಲ್ಲಿ ಎಲ್ಲ ಪಕ್ಷದವರು ಕೂಡ ಇದ್ದರು. ಸ್ವಾಗತ ಸಮಿತಿಯಲ್ಲೂ ಬಿಜೆಪಿ ಮುಖಂಡರು ಕೂಡ ಇದ್ದಾರೆ. ಇದು ಪಕ್ಷಾತೀತವಾಗಿ ಮಾಡಿರುವ ಕಾರ್ಯಕ್ರಮವಾಗಿದೆ’
-ವಿನಯ ಕುಮಾರ್ ಸೊರಕೆ, ಅಧ್ಯಕ್ಷರು, ಸ್ವಾಗತ ಸಮಿತಿ, ಬಿಲ್ಲವ ಮುಸ್ಲಿಮ್ ಸ್ನೇಹ ಸಮಾವೇಶ
‘ಒಕ್ಕೂಟವು ಕಳೆದ 18ವರ್ಷಗಳಿಂದ ಹಲವು ಕೋಮು ಸೌಹಾರ್ದ ಸಮಾವೇಶವನ್ನು ನಡೆಸಿಕೊಂಡು ಬರುತ್ತಿದ್ದೇವೆ. ಅದೇ ರೀತಿ ಇದೀಗ ಬೇರೆ ಬೇರೆ ಸಮುದಾಯಗಳೊಂದಿಗೆ ಸ್ನೇಹ ಸಮಾವೇಶ ಮಾಡಲು ನಿರ್ಧರಿಸಿದ್ದೇವೆ. ಅದರಲ್ಲಿ ಈ ವರ್ಷ ಐದು ಮತ್ತು ಮುಂದಿನ ವರ್ಷ ಐದು ಸಮುದಾಯಗಳೊಂದಿಗೆ ಸಮಾವೇಶ ಮಾಡಲು ನಿರ್ಧರಿಸಿದ್ದೇವೆ’
-ಯಾಸೀನ್ ಮಲ್ಪೆ, ಅಧ್ಯಕ್ಷರು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ








