ದ.ಕ. ಜಿಲ್ಲಾಧಿಕಾರಿ ಆದೇಶ ನಕಲು: ದೂರು ದಾಖಲು

ಮಂಗಳೂರು, ಜ.8: ಕಳೆದ ಕೆಲ ತಿಂಗಳಿಂದ ಶಾಲಾ-ಕಾಲೇಜುಗಳ ರಜೆ ವಿಷಯದಲ್ಲಿ ಹಲವು ಬಾರಿ ಜಿಲ್ಲಾಧಿಕಾರಿ ಕಚೇರಿ ಆದೇಶವನ್ನು ನಕಲು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿ, ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.
ದೂರನ್ನು ಗಂಭೀರವಾಗಿ ಪರಿಗಣಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಐಪಿಸಿ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮಕ್ಕೆ ದೂರಿನಲ್ಲಿ ಆಗ್ರಹಿಸಲಾಗಿದೆ.
2019ರ ಡಿ.20 ಮತ್ತು 21ರಂದು ದ.ಕ. ಜಿಲ್ಲಾದ್ಯಂತ ಎಲ್ಲ ಅಂಗನವಾಡಿ ಕೇಂದ್ರ ಸೇರಿದಂತೆ ಪದವಿ ತರಗತಿವರೆಗೆ ರಜೆ ಘೋಷಿಸಿ ಡಿ.19 ಮತ್ತು 20ರಂದು ಜಿಲ್ಲಾಧಿಕಾರಿ ಕಚೇರಿಯಿಂದ ಹೊರಡಿಸಲಾದ ಆದೇಶಗಳನ್ನು ದುಷ್ಕರ್ಮಿಗಳು ತಿದ್ದುಪಡಿ ಮಾಡಿದ್ದ ಪ್ರಕರಣ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೆ, ಪ್ರಸಕ್ತ ವರ್ಷದ ಜ.8ರಂದು ಜಿಲ್ಲೆಯ ಅಂಗನವಾಡಿ ಸೇರಿದಂತೆ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದಂತೆಯೇ ವಿನ್ಯಾಸಗೊಳಿಸಿ ನಕಲು ಆದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಹರಿಬಿಟ್ಟಿದ್ದರು. ಜಿಲ್ಲಾಧಿಕಾರಿ ಕಚೇರಿಯ ಲೆಟರ್ ಹೆಡ್, ಜಿಲ್ಲಾಧಿಕಾರಿ ಸಹಿಯನ್ನು ದುರ್ಬಳಕೆ ಮಾಡಿ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾ ಪ್ರೊಟೊಕಾಲ್ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ಆರೋಪಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಅನ್ವಯ ದೂರು ದಾಖಲಾಗಿದೆ.







