ಉಳ್ಳಾಲ: ಎನ್‍ಆರ್ ಸಿ, ಸಿಎಎ, ಎನ್‍ಪಿಆರ್ ಜನಾಂದೋಲನ

ಉಳ್ಳಾಲ: ದ.ಕ. ಜಿಲ್ಲಾ ಪೌರ ಸಮನ್ವಯ ಸಮಿತಿ ಇದರ ಆಶ್ರಯದಲ್ಲಿ ಎನ್‍ಆರ್‍ಸಿ , ಸಿಎಎ ಮತ್ತು ಎನ್‍ಪಿಆರ್ ಏನೆಂದು ನಮಗೆ ತಿಳಿದಿದೆ ಇದರ ಬಗ್ಗೆ ಮಾಹಿತಿ ನೀಡಲು ಬರಬೇಡಿ ಎಂಬ ಮಾಹಿತಿಯ ಸ್ಟಿಕರ್ ಬಿಡುಗಡೆ ಹಾಗೂ ಜನಾಂದೋಲನ ಕಾರ್ಯಕ್ರಮ ಉಳ್ಳಾಲ ದರ್ಗಾ ವಠಾರದಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಂಗ್ರೆಸ್ ಮುಖಂಡ ದಿನೇಶ್ ಕುಂಪಲ ಮಾತನಾಡಿ, ಎನ್‍ಆರ್‍ಸಿ ಸಮಸ್ಯೆ ಕೇವಲ ಮುಸ್ಲಿಮರಿಗೆ ಮಾತ್ರ ಅನ್ವಯವಾದುದಲ್ಲ. ಈ ಸಮಸ್ಯೆ ಎಲ್ಲರ ಕಾಲಬುಡಕ್ಕೂ ಬರುತ್ತದೆ. ಪೌರ ಕಾಯಿದೆ ಹಿಂದುಳಿದ ಸಮಾಜದ ಜನರನ್ನು ದಲಿತ , ಆದಿವಾಸಿ ಜನರನ್ನು ತಿವ್ರ ಸಂಕಷ್ಟಕೀಡು ಮಾಡಿದೆ. ಮನುಷ್ಯ ವಿರೋಧಿ ಕಾಯಿದೆಯನ್ನು ಎಲ್ಲರೂ ವಿರೋಧಿಸಬೇಕಾ ಗಿದೆ. ಈ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕಾಗಿದೆ ಎಂದರು.
ಭಗವತಿ ದೇವಸ್ಥಾನದ ಉಪಾಧ್ಯಕ್ಷ ಸುರೇಶ್ ಭಟ್ನಗರ ಮಾತನಾಡಿ, ಎನ್‍ಆರ್ ಸಿ ಸಿಎಎ, ಮತ್ತು ಎನ್‍ಪಿಆರ್ ಇವ್ಯಾವುದೇ ಇರಲಿ, ಇದರಿಂದ ಯಾವುದೇ ಧರ್ಮದವರಿಗೆ ತೊಂದರೆ ಆಗಬಾರದು. ಭಾರತ ಜಾತಿ ಭೇದ ಇಲ್ಲದ ರಾಷ್ಟ್ರ. ಇಲ್ಲಿ ಎನ್‍ಆರ್‍ಸಿ ಮೂಲಕ ಸರಕಾರ ಜನರನ್ನು ವಿಭಜನೆ ಮಾಡುವ ಅಗತ್ಯ ಇಲ್ಲ. ಭಾರತದಲ್ಲಿ ವಿಷಬೀಜ ಬಿತ್ತು ಕಾರ್ಯ ನಡೆಯುತ್ತಿದೆ. ಎನ್‍ಆರ್‍ಸಿಯ ಪರಿಣಾಮ ಏನಾಗುತ್ತದೆ ಎಂದು ಎಲ್ಲರಿಗೂ ಅರ್ಥವಾಗಿಲ್ಲ. ಅಂತಿಮ ಕ್ಷಣದಲ್ಲಿ ಹಿಂದುಗಳೇ ವಿರೋಧಿಸುವ ಕಾಲ ಬರುತ್ತದೆ. ನಮ್ಮದು ಭಾರತ ಮಾತ್ರವಲ್ಲ, ಜಗತ್ತೇ ನಮ್ಮದಾಗಿದೆ. ಜನರನ್ನು ಕಂಗಾಲುಗೊಳಿಸುವಂತಹ ಯೊಜನೆಯನ್ನು ಸರಕಾರ ಜಾರಿ ಮಾಡಿ ಭೀತಿಯ ವಾತಾವರಣದಲ್ಲಿ ಕೂರಿಸುವ ಕೆಲಸ ಸರಿಯಲ್ಲ. ಇದನ್ನು ಎಂದಿಗೂ ವಿರೋಧಿಸುತ್ತೇವೆ ಎಂದರು.
ದ.ಕ. ಜಿಲ್ಲಾ ಪೌರ ಸಮನ್ವಯ ಸಮಿತಿ ಸಂಚಾಲಕ ಫಾರೂಕ್ ಉಳ್ಳಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಜನಾಂದೋಲನದ ಸ್ಟಿಕರ್ ಅನ್ನು ಅಬ್ಬಾಸ್ ಅವರಿಗೆ ನೀಡುವ ಮೂಲಕ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಬಾಜಿಲ್‍ಡಿಸೋಜ, ರವಿ, ಮಹಮ್ಮದ್ ಮುಕಚೇರಿ , ದರ್ಗಾ ಪ್ರ. ಕಾರ್ಯದರ್ಶಿತ್ವಾಹಾ ಹಾಜಿ, ಉಪಾಧ್ಯಕ್ಷ ಮೋನು ಇಸ್ಮಾಯಿಲ್, ಅಬ್ಬಾಸ್, ಅಸ್ಗರ್ ಅಲಿ, ರಮೀಝ್ ಕೋಡಿ, ಮುಸ್ತಫಾ ಎವರೆಸ್ಟ್, ಅಲ್ತಾಫ್ ಹಳೆಕೋಟೆ, ಯು.ಕೆ. ಅಬ್ಬಾಸ್, ಯು.ಕೆ. ಯೂಸುಫ್, ರಾಮ ಆಚಾರಿ, ಎ.ಆರ್, ನಝೀರ್, ರಿಚಾರ್ಡ್ ಪೀಯುಸ್ ಡಿಸೋಜ, ಕುಂಞಿಮೋನು ಉಳ್ಳಾಲ್, ನಝೀರ್ ಉಳ್ಳಾಲ್, ಕುಬೈಬ್ ತಂಙಳ್, ನಿಝಾಂ, ಅಕ್ರಂ, ಯು.ಎ. ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.









