ಅಸ್ತಾನಾ ವಿರುದ್ಧ ತನಿಖೆಯಲ್ಲಿ ವಿಳಂಬ: ಸಿಬಿಐಗೆ ಚಾಟಿ ಬೀಸಿದ ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ,ಜ.8: ಸಿಬಿಐ ಮಾಜಿ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ವಿರುದ್ಧದ ತನಿಖೆಯಲ್ಲಿ ವಿಳಂಬಕ್ಕಾಗಿ ದಿಲ್ಲಿ ಉಚ್ಚ ನ್ಯಾಯಾಲಯವು ಬುಧವಾರ ತನಿಖಾ ಸಂಸ್ಥೆಯನ್ನು ತೀವ್ರ ತರಾಟೆಗೆತ್ತಿಕೊಂಡಿದೆ. ನಾಲ್ಕು ವಾರಗಳಲ್ಲಿ ತನಿಖೆಯು ಪೂರ್ಣಗೊಳ್ಳದಿದ್ದರೆ ತನ್ನೆದುರು ಖುದ್ದಾಗಿ ಹಾಜರಾಗುವಂತೆ ಸಿಬಿಐ ಮುಖ್ಯಸ್ಥ ಆರ್.ಕೆ.ಶುಕ್ಲಾ ಅವರಿಗೆ ನಿರ್ದೇಶ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯು ಫೆ.12ರಂದು ನಡೆಯಲಿದೆ.
ಸಿಬಿಐ ಕಳೆದ ವರ್ಷದ ಡಿ.9ರಂದು ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ಅಸ್ತಾನಾ ವಿರುದ್ಧ ತನಿಖೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯಾವಕಾಶವನ್ನು ಕೋರಿತ್ತು.
ಅಸ್ತಾನಾ ಮತ್ತು ಆಗಿನ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರ ನಡುವಿನ ಬಹಿರಂಗ ಕಚ್ಚಾಟದ ನಡುವೆಯೇ 2018,ಅ.15ರಂದು ಅಸ್ಥಾನಾ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗಿತ್ತು. ಅಂತಿಮವಾಗಿ ಸರಕಾರವು ಇಬ್ಬರನ್ನೂ ವರ್ಗಾವಣೆಗೊಳಿಸಿತ್ತು. ತನ್ನ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅಸ್ತಾನಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ದಿಲ್ಲಿ ಉಚ್ಚ ನ್ಯಾಯಾಲಯವು ತನಿಖೆಯನ್ನು 10 ವಾರಗಳಲ್ಲಿ ಪೂರ್ಣಗೊಳಿಸುವಂತೆ ಜ.11ರಂದು ಸಿಬಿಐಗೆ ನಿರ್ದೇಶ ನೀಡಿತ್ತು. ಆದರೆ ಸಿಬಿಐ ಇನ್ನಷ್ಟು ಕಾಲಾವಕಾಶವನ್ನು ಕೋರಿದ್ದು,ನ್ಯಾಯಾಲಯವು ಮೇ 31ರ ಅಂತಿಮ ಗಡುವನ್ನು ವಿಧಿಸಿತ್ತು.
ನಂತರ ಸಿಬಿಐ ಮತ್ತೆ ಮೂರು ತಿಂಗಳ ಕಾಲಾವಕಾಶವನ್ನು ನೀಡುವಂತೆ ಉಚ್ಚ ನ್ಯಾಯಾಲಯವನ್ನು ಕೋರಿಕೊಂಡಿತ್ತು. ನ್ಯಾಯಾಲಯವು ‘ಇನ್ನು ಮುಂದೆ ಗಡುವನ್ನು ವಿಸ್ತರಿಸುವುದಿಲ್ಲ ’ಎಂಬ ಕಠಿಣ ಎಚ್ಚರಿಕೆಯೊಂದಿಗೆ ಎರಡು ತಿಂಗಳ ಹೆಚ್ಚಿನ ಕಾಲಾವಕಾಶ ನೀಡಿತ್ತು. ಈಗ ಪ್ರಕರಣದಲ್ಲಿ ಮೂರನೇ ಬಾರಿ ಸಿಬಿಐ ಗಡುವು ವಿಸ್ತರಣೆಗೆ ಕೋರಿತ್ತು.
ಪ್ರಕರಣದಲ್ಲಿಯ ತನಿಖಾಧಿಕಾರಿ ಸತೀಶ ದಾಗರ್ ಅವರು ಈಗಾಗಲೇ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಮುಂದಿನ ಪರಿಶೀಲನೆಗಾಗಿ ತನಿಖಾ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿದ್ದಾರೆ ಎಂದು ಸಿಬಿಐನಲ್ಲಿಯ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ. ಸಿಬಿಐ ಪದ್ಧತಿಯಂತೆ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮುನ್ನ ಎಂಟು ಹಂತಗಳಲ್ಲಿ ಅದರ ಪರಿಶೀಲನೆ ನಡೆಯಬೇಕು. ಅದೀಗ ಮೂರು ಹಂತಗಳನ್ನು ದಾಟಿದೆ,ಇನ್ನೂ ಐದು ಹಂತಗಳು ಬಾಕಿಯಿವೆ ಎಂಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಆಗಿನ ಡಿಐಜಿ ಎಂ.ಕೆ.ಸಿನ್ಹಾ ಸೇರಿದಂತೆ ಅಸ್ತಾನಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಅಧಿಕಾರಿಗಳನ್ನೂ ತನಿಖೆೆಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಿನ್ಹಾ ಮತ್ತು ಇಬ್ಬರು ಹಿರಿಯ ಅಧಿಕಾರಿಗಳನ್ನು ಸಿಬಿಐನಿಂದ ವರ್ಗಾವಣೆಗೊಳಿಸಲಾಗಿತ್ತು.
ನಾಲ್ಕು ತಿಂಗಳ ಹಿಂದೆ ದಾಗರ್ ಅವರು ಡಿ.1ರಿಂದ ಸ್ವಯಂಪ್ರೇರಿತ ನಿವೃತ್ತಿಯನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸರಕಾರವು ತಿರಸ್ಕರಿಸಿತ್ತು.







