ಸಿದ್ದರಾಮಯ್ಯಗೆ ಓಪನ್ ಚಾಲೆಂಜ್: ಸಚಿವ ಆರ್.ಅಶೋಕ್

ಉಡುಪಿ, ಜ.8: ಸಿದ್ದರಾಮಯ್ಯಗೆ ಓಪನ್ ಚಾಲೆಂಜ್ ಹಾಕುತ್ತೇನೆ. ನರೇಂದ್ರ ಮೋದಿ ಮತ್ತು ಮನಮೋಹನ ಸಿಂಗ್ ಸರಕಾರಗಳು ರಾಜ್ಯಕ್ಕೆ ಎಷ್ಟು ಅನುದಾನವನ್ನು ನೀಡಿವೆ ಎಂಬುದರ ಬಗ್ಗೆ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ ಎಂದು ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಿದ್ದರಾಮಯ್ಯ ಆ ಬಗ್ಗೆ ವಿವರ ಇಟ್ಟುಕೊಂಡು ಬರಲಿ. ಅಭಿವೃದ್ಧಿ, ಬರ, ನರೆ, ರಸ್ತೆಯ ಅನುದಾದ ಲೆಕ್ಕ ಕೊಡಲಿ. ಅಂಕಿ ಅಂಶ ಇಟ್ಟುಕೊಂಡು ಸಿದ್ದರಾಮಯ್ಯ ಮಾತನಾಡಲಿ. ಸಮ್ಮನೆ ಬೀದಿಯಲ್ಲಿ ಮಾತಾಡಿ ಏನೂ ಸಾಧಿಸಲಾಗದು ಎಂದರು.
ಭಾರತ್ ಬಂದ್ ಕರೆಯುವ ಅವಶ್ಯಕತೆ ಇರಲಿಲ್ಲ. ಬಂದ್ ಕರೆ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಆಗುತ್ತದೆ. ಜನರು ಕೂಡ ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಜನ ಬಂದ್ ತಿರಸ್ಕಾರ ಮಾಡಿದ್ದಾರೆ. ಕಮ್ಯೂನಿಸ್ಟ್ ಪ್ರೇರಿತ ಬಂದ್ ಹೇರಿಕೆ ಸರಿಯಲ್ಲ. ಬಂದ್‌ನಿಂದ ಯಾವುದೇ ಉದ್ದೇಶ ಈಡೇರುವುದಿಲ್ಲ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಎಲ್ಲೂ ಬಂದ್ ಆಗಿಲ್ಲ. ದಿನನಿತ್ಯದ ಚಟುವಟಿಕೆಗಳು ಸಾಮಾನ್ಯವಾಗಿದ್ದವು. ಶಾಲಾ ಕಾಲೇಜುಗಳು ತೆರೆದಿದ್ದವು. ವ್ಯಾಪಾರ ವ್ಯವಹಾರ ಸಹಜವಾಗಿಯೇ ಇತ್ತು. ಕೆಲವು ಕಡೆ ಎಡಪಕ್ಷಗಳು ಮುಷ್ಕರ ಮಾಡಿವೆ ಮತ್ತು ಶಾಂತಿಯುತ ಪ್ರತಿಭಟನೆ ನಡೆದಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.







