ಅನುಮತಿ ಪಡೆಯದೆ ಪ್ರತಿಭಟನೆ: ಸಿಎಫ್‌ಐ ಪ್ರಮುಖರ ವಿರುದ್ಧ ಪ್ರಕರಣ

ಉಡುಪಿ, ಫೆ.8: ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಜ.7ರಂದು ಸಿಎಎ, ಎನ್‌ಆರ್‌ಸಿ ಮತ್ತು ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ದಾಳಿ ಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲೆಯ ಪ್ರಮುಖರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಸಿಎಫ್‌ಐ ಜಿಲ್ಲಾಧ್ಯಕ್ಷ ಮಹಮ್ಮದ್ ಶಫಿ, ಅಬ್ದುಲ್ ಜಬ್ಬಾರ್ ಮಂಗಳೂರು, ಮಣಿಪಾಲ ವಿವಿ ವಿದ್ಯಾರ್ಥಿ ಪಾಂಜಾಲ, ನಾಝ್ ಶೇಖ್, ಅಶ್ರಫ್, ಸಫ್ವಾನ ಪಡುಬಿದ್ರಿ, ಮಸೂದ್ ನಂದಿಗುಡ್ಡೆ ಹಾಗೂ ಫಯೀಮ್ ಮಲ್ಪೆಮತ್ತು 100ಕ್ಕೂ ಹೆಚ್ಚು ಮಹಿಳೆ ಮತ್ತು ಪುರುಷ ಕಾರ್ಯಕರ್ತರು ಅಕ್ರಮಕೂಟ ಸೇರಿ ರಸ್ತೆಯನ್ನು ಬಂದ್ ಮಾಡಿ ಯಾವುದೇ ಪರವಾನಿಗೆ ಇಲ್ಲದೇ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸಿರುವುದಾಗಿ ದೂರಲಾಗಿದೆ.
ಈ ಮೂಲಕ ಸಾರ್ವಜನಿಕರಿಗೆ, ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಅಡೆ ತಡೆಯನ್ನು ಉಂಟು ಮಾಡಿ, ಉಡುಪಿ ನಗರ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪ್ರಭಾರ ಪೊಲೀಸ್ ಉಪನಿರೀಕ್ಷಕ ಶೇಖರ್ ಅವರ ಮಾತನ್ನು ಕೇಳದೆ ಪ್ರತಿಭಟನೆ ಮುಂದುವರೆಸಿ ಕರ್ತವ್ಯ ನಿರ್ವಹಿಸದಂತೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 143,147, 341, 353, 290 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.







