ಟ್ವೆಂಟಿ- 20 ಕ್ರಿಕೆಟ್: ಒಂದೇ ದಿನ ಇಬ್ಬರು ಆಟಗಾರರಿಂದ ಹ್ಯಾಟ್ರಿಕ್ ಸಾಧನೆ

ಫೋಟೋ: twitter@BBL
ಅಡಿಲೇಡ್, ಜ.8: ಬಿಗ್ ಬಾಷ್ ಲೀಗ್ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಪರ ಆಡುವ ಪಾಕಿಸ್ತಾನದ ಹಾರಿಸ್ ರವೂಫ್ ಹಾಗೂ ಅಡಿಲೇಡ್ ಸ್ಟ್ರೈಕರ್ಸ್ ಪರ ಆಡುವ ಅಫ್ಗಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಹ್ಯಾಟ್ರಿಕ್ ವಿಕೆಟ್ ಕಿತ್ತು ಸಾಧನೆ ಮಾಡಿದ್ದಾರೆ.
ಅಡಿಲೇಡ್ ಸ್ಟ್ರೈಕರ್ಸ್ ಆಲ್ರೌಂಡರ್ ರಶೀದ್ ಖಾನ್ ಬುಧವಾರ ಚುಟುಕು ಮಾದರಿ ಕ್ರಿಕೆಟ್ನಲ್ಲಿ ಮೂರನೇ ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದು ದಾಖಲೆ ನಿರ್ಮಿಸಿದರು. ಈಗ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್ನಲ್ಲಿ(ಬಿಬಿಎಲ್) ಸಿಡ್ನಿ ಸಿಕ್ಸರ್ ವಿರುದ್ಧ ಈ ಮೈಲುಗಲ್ಲು ತಲುಪಿದ್ದಾರೆ. ಜೇಮ್ಸ್ ವಿನ್ಸಿ, ಜಾಕ್ ಎಡ್ವರ್ಡ್ಸ್ ಹಾಗೂ ಜೋರ್ಡನ್ ಸಿಲ್ಕ್ರನ್ನು ಸತತ ಎಸೆತಗಳಲ್ಲಿ ಔಟ್ ಮಾಡಿದ ರಶೀದ್ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದರು.
ಸಿಕ್ಸರ್ ತಂಡ ಈ ಪಂದ್ಯವನ್ನು 2 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿತು.
ಪಾಕ್ನ ರವೂಫ್ ಹ್ಯಾಟ್ರಿಕ್
ಪಾಕಿಸ್ತಾನದ ವೇಗಿ ಹಾರೀಸ್ ರವೂಫ್ ಬುಧವಾರ ಬಿಗ್ ಬ್ಯಾಶ್ ಲೀಗ್ನಲ್ಲಿ ಮೆಲ್ಬೋರ್ನ್ ತಂಡದ ಪರ ಹ್ಯಾಟ್ರಿಕ್ ವಿಕೆಟ್ ಪಡೆದರು. ಸಿಡ್ನಿ ಥಂಡರ್ ತಂಡದ ವಿರುದ್ಧ ಪಂದ್ಯದಲ್ಲಿ ರವೂಫ್ 3 ಓವರ್ಗಳಲ್ಲಿ ವಿಕೆಟ್ ಪಡೆದಿರಲಿಲ್ಲ. ಆದರೆ ತನ್ನ ನಾಲ್ಕನೇ ಹಾಗೂ ಕೊನೆಯ ಓವರ್ನ ಅಂತಿಮ 3 ಎಸೆತಗಳಲ್ಲಿ ಹ್ಯಾಟ್ರಿಕ್ ಪಡೆದರು. ರವೂಫ್ 4 ಓವರ್ಗಳಲ್ಲಿ 23ಕ್ಕೆ 3 ವಿಕೆಟ್ ಗಿಟ್ಟಿಸಿಕೊಂಡರು.
ರವೂಫ್ ದಾಳಿಗೆ ಸಿಲುಕಿದ ಸಿಡ್ನಿ ಥಂಡರ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 145 ರನ್ ಗಳಿಸಿತ್ತು. ಮೆಲ್ಬೋರ್ನ್ ತಂಡ 4 ವಿಕೆಟ್ಗಳ ನಷ್ಟದಲ್ಲಿ 148 ರನ್ ಗಳಿಸಿ 6 ವಿಕೆಟ್ಗಳ ಅಂತರದಲ್ಲಿ ಜಯ ಸಾಧಿಸಿತು.







