ಅಕಾಡಮಿ ಆಯ್ಕೆ ಮಾಡಿದ ಎಲ್ಲರಿಗೂ ಪ್ರಶಸ್ತಿ ಪ್ರದಾನ ಮಾಡಿ: ಸಚಿವ ಸಿ.ಟಿ.ರವಿಗೆ ಮನವಿ
ನಾಟಕ ಅಕಾಡಮಿ ಪ್ರಶಸ್ತಿ ರದ್ದು ವಿಚಾರ
ಬೆಂಗಳೂರು, ಜ.8: ಪ್ರಸ್ತುತ ಸಾಲಿನ ಕರ್ನಾಟಕ ನಾಟಕ ಅಕಾಡಮಿಯು ಪ್ರಕಟಿತ ಪ್ರಶಸ್ತಿಗಳನ್ನು ರದ್ದು ಮಾಡಿದ ಹಿನ್ನೆಲೆಯಲ್ಲಿ ಜೆ.ಲೊಕೇಶ್ ಅವರು ಸಚಿವ ಸಿ.ಟಿ.ರವಿ ಅವರನ್ನು ಭೇಟಿ ಮಾಡಿ, ಎಲ್ಲವೂ ಬೈಲಾ ನಿಯಮಾವಳಿಗಳ ಪ್ರಕಾರವೇ ನಡೆದಿದೆ. ಹೀಗಾಗಿ, ಹಿಂದೆ ಪ್ರಕಟಿತವಾದ ಪ್ರಶಸ್ತಿ ಪುರಸ್ಕೃತರ ಜತೆಗೆ ಈಗಿನ ಅಕಾಡಮಿ ಆಯ್ಕೆ ಮಾಡಿದ ಪ್ರಶಸ್ತಿ ಪುರಸ್ಕೃತರನ್ನೂ ಸೇರಿಸಿ ಒಟ್ಟಿಗೆ ಪ್ರಶಸ್ತಿ ಪ್ರದಾನ ಮಾಡುವಂತೆ ಮನವಿ ಮಾಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದಿಂದ ನಾಟಕ ಅಕಾಡಮಿಯ ನಿಕಟ ಪೂರ್ವ ಅಧ್ಯಕ್ಷ ಜೆ.ಲೋಕೇಶ್ ಅವರಿಗೆ ಕರೆ ಬಂದ ಹಿನ್ನೆಲೆಯಲ್ಲಿ ನಾಟಕ ಅಕಾಡಮಿಯ ಮಾಜಿ ಸದಸ್ಯರಾದ ಶಶಿಕಾಂತ ಯಡಹಳ್ಳಿ, ಬಿ.ಎಸ್.ವಿದ್ಯಾರಣ್ಯ ಮತ್ತು ಬರಹಗಾರ ಸಿರಿಗೆರೆ ಯರ್ರಿಸ್ವಾಮಿ ಹಾಗೂ ಜೆ.ಲೊಕೇಶ್ ಅವರು ಸಚಿವ ಸಿ.ಟಿ.ರವಿ ಅವರನ್ನು ಭೇಟಿಯಾಗಿ 'ನಾಟಕ ಅಕಾಡಮಿಯ ಹಾಲಿ ಅಧ್ಯಕ್ಷ ಭೀಮಸೇನ್‌ರವರು ನಿಮಗೆ ತಪ್ಪು ಮಾಹಿತಿ ನೀಡಿದ್ದಾರೆ. ಅಲ್ಲದೆ, ಎಲ್ಲವೂ ಬೈಲಾ ನಿಯಮಾವಳಿಗಳ ಪ್ರಕಾರವೇ ನಡೆದಿದ್ದು, ಸರ್ವ ಸದಸ್ಯರು ಹಾಗೂ ರಿಜಿಸ್ಟ್ರಾರ್ ಅವರ ಒಪ್ಪಿಗೆಯ ಮೇರೆಗೆ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ' ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವ ಸಿ.ಟಿ.ರವಿ ಅವರು, ಎಲ್ಲವನ್ನೂ ಇನ್ನೊಮ್ಮೆ ಪರಿಶೀಲಿಸಿ ಒಂದೆರಡು ದಿನಗಳಲ್ಲಿ ಸೂಕ್ತ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡುವೆ ಎಂದು ಹೇಳಿದ್ದಾರೆ.
ಇದರ ಜೊತೆಗೆ ರಂಗಭೂಮಿ ಪ್ರಾಧಿಕಾರ ಒಂದನ್ನು ಆರಂಭಿಸಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ರಂಗಮಂದಿರಗಳನ್ನು ನಿರ್ಮಿಸಿ ನಿರ್ವಹಣೆ ಮಾಡಬೇಕು ಎಂಬ ಮಹತ್ವಾಂಕಾಂಕ್ಷಿ ಯೋಜನೆಯ ಕುರಿತು ಪ್ರಾತ್ಯಕ್ಷಿಕ ಮಾಹಿತಿಗಳನ್ನು ಸಚಿವರಿಗೆ ಲೋಕೇಶರವರು ಇದೇ ವೇಳೆ ನೀಡಿದ್ದಾರೆ. ಈ ಯೋಜನೆಗೆ ಪೂರಕವಾದ ನೀಲನಕ್ಷೆ, 3ಡಿ ಪ್ರಸೆಂಟೇಶನ್ ಮತ್ತು ಖರ್ಚು ವೆಚ್ಚಗಳ ವಿವರಗಳನ್ನೂ ಒದಗಿಸಿದ್ದಾರೆ. ಸಚಿವರು ಈ ಬಜೆಟ್‌ನಲ್ಲಿ ಇದನ್ನು ಅಳವಡಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದ್ದಾರೆ. ಈ ಹಿಂದೆ ಪ್ರಕಟಿತ ಪ್ರಶಸ್ತಿಗಳನ್ನು ರಂಗಸಾಧಕರಿಗೆ ಪ್ರದಾನ ಮಾಡುವುದು ಹಾಗೂ ರಂಗ ಮಂದಿರ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತರುವುದು. ಈ ಎರಡು ವಿಷಯಗಳ ಕುರಿತು ಸಕಾರಾತ್ಮಕ ಸ್ಪಂದನೆ ಸಚಿವರಿಂದ ದೊರಕಿದೆ ಎಂದು ನಾಟಕ ಅಕಾಡಮಿಯ ನಿಕಟ ಪೂರ್ವ ಅಧ್ಯಕ್ಷ ಜೆ.ಲೋಕೇಶ್ ತಿಳಿಸಿದ್ದಾರೆ
ಪ್ರಸ್ತುತ ಸಾಲಿನ ವಾರ್ಷಿಕ ಪ್ರಶಸ್ತಿಗೆ ರಂಗಭೂಮಿ ಸಾಧಕರ ಪಟ್ಟಿ ಅಂತಿಮಗೊಳಿಸಿದ್ದು, ಹಿರಿಯ ರಂಗಕರ್ಮಿ ಉಮಾಶ್ರೀ ಅವರು ಜೀವಮಾನ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಕಲಾವಿದ ಅರುಣ್ ಸಾಗರ್, ಸಾಹಿತಿ ಲಕ್ಷ್ಮೀಪತಿ ಕೋಲಾರ ಸೇರಿ 25 ಮಂದಿ ವಾರ್ಷಿಕ ರಂಗ ಪ್ರಶಸ್ತಿಗೆ ಹಾಗೂ ಲಿಂಗರಾಜು ದಂಡಿನ ಕಲ್ಲೂರ ಸೇರಿ ನಾಲ್ಕು ಮಂದಿ 4 ದತ್ತಿ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ, ಕರ್ನಾಟಕ ನಾಟಕ ಅಕಾಡಮಿ ಹಾಲಿ ಅಧ್ಯಕ್ಷ ಪ್ರೊ.ಆರ್.ಭೀಮಸೇನ್ ಅವರು ಪ್ರಸ್ತುತ ಸಾಲಿನ ವಾರ್ಷಿಕ ಪ್ರಶಸ್ತಿ ಅಸಿಂಧುಗೊಳಿಸಿ, ಹೊಸ ಪ್ರಶಸ್ತಿ ಪಟ್ಟಿ ಪ್ರಕಟಿಸಿ ಸಾಂಸ್ಕೃತಿಕ ಲೋಕದಲ್ಲಿ ಗೊಂದಲ ಉಂಟು ಮಾಡಿದ್ದರು.







