ಉಡುಪಿ: ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರಿಗೆ ಪೌರ ಸನ್ಮಾನ

ಉಡುಪಿ, ಜ.8: ತಮ್ಮ ಗುರುಗಳಾದ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ ಹಾಗೂ ತಮ್ಮ ಎರಡು ವರ್ಷಗಳ ಪರ್ಯಾಯ ಪೂಜೆಯನ್ನು ಯಶಸ್ವಿಯಾಗಿ ನೆರವೇರಿಸಿರುವ ನನ್ನ ವಿದ್ಯಾಗುರುಗಳಾದ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀ ಮಾರ್ಗದರ್ಶನದಲ್ಲಿ ನನ್ನ ಈ ಮೊದಲ ಪರ್ಯಾಯ ನಡೆಯಲಿದೆ ಎಂದು ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು ಹೇಳಿದ್ದಾರೆ.
ಹಿರಿಯ ಯತಿಗಳ ಆಶಯದಂತೆ ಜ.18ರಂದು ಮೊದಲ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡಲಿರುವ ಅದಮಾರುಶ್ರೀ ಗಳು ಪರ್ಯಾಯ ಪೂರ್ವ ತೀರ್ಥಯಾತ್ರೆ ಮುಗಿಸಿ ಇಂದು ಪುರಪ್ರವೇಶಿಸಿದ್ದು, ಸಂಜೆ ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ನಗರಸಭೆ ವತಿಯಿಂದ ಹಾಗೂ ಪರ್ಯಾಯ ಅದಮಾರು ಮಠದ ಶ್ರೀಕೃಷ್ಣ ಸೇವಾ ಬಳಗದ ವತಿಯಿಂದ ಆಯೋಜಿಸಲಾದ ಪೌರಸನ್ಮಾನವನ್ನು ಸ್ವೀಕರಿಸಿ ಮಾತನಾಡುತಿದ್ದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ತಮ್ಮ ಶಿಷ್ಯನ ಎರಡು ವರ್ಷಗಳ ಶ್ರೀಕೃಷ್ಣ ಪೂಜಾ ಕೈಂಕರ್ಯಕ್ಕೆ ಶುಭವನ್ನು ಹಾರೈಸಿದರು.
ಶ್ರೀಗಳಿಗೆ ನಗರಸಭೆಯ ವತಿಯಿಂದ ರಾಜ್ಯ ಪೌರಾಡಳಿತ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಉಡುಪಿ ಜನತೆಯ ಪರವಾಗಿ ಪೌರ ಸನ್ಮಾನ ನಡೆದು ಬಿನ್ನವತ್ತಳೆ ಸಮರ್ಪಣೆ ನಡೆಯಿತು. ನಗರಸಭೆಯ ಆಡಳಿತಾಧಿಕಾರಿ ಯಾಗಿರುವ ಜಿಲ್ಲಾಧಿಕಾರಿ ಜಿ.ಜಗದೀಶ್, ನಗರಸಭೆಯ ಪೌರಾಯುಕ್ತ ಆನಂದ ಕಲ್ಲೋಳಿಕರ್ ಅವರು ಶ್ರೀಗಳನ್ನು ಸನ್ಮಾನಿಸಿದರು.
ಬಳಿಕ ಶ್ರೀಕೃಷ್ಣ ಸೇವಾ ಬಳಗದ ವತಿಯಿಂದ ಗೌರವಾಧ್ಯಕ್ಷ ಕೆ.ರಘುಪತಿ ಭಟ್, ಅಧ್ಯಕ್ಷ ಎಂ.ಬಿ.ಪುರಾಣಿಕ್ ಹಾಗೂ ಮಠದ ದಿವಾನರಾದ ಐ. ಲಕ್ಷ್ಮಿನಾರಾಯಣ ಮುಚ್ಚಿಂತ್ತಾಯ ಅವರು ಭಾವಿ ಪರ್ಯಾಯ ಶ್ರೀಗಳನ್ನು ಸನ್ಮಾನಿಸಿದರು. ಬಳಿಕ ಎಸ್‌ಕೆಡಿಬಿ ಎಜ್ಯುಕೇಷನ್ ಸೊಸೈಟಿ ವತಿಯಿಂ ಬಿನ್ನವತ್ತಳಿಕೆ ಸಮರ್ಪಿಸಲಾಯಿತು
ಮಂಗಳೂರಿನ ಕಲ್ಕೂರ ಸಂಸ್ಥೆ ಹೊರತಂದ ಅಂಚೆ ಲಕೋಟೆಯನ್ನು ಅದಮಾರುಶ್ರೀಗಳು ಬಿಡುಗಡೆಗೊಳಿಸಿದರೆ, ಪರ್ಯಾಯ ಪಂಚಾಂಗವನ್ನು ಪಲಿಮಾರುಶ್ರೀಗಳು ಅನಾವರಣಗೊಳಿಸಿದರು. ಇದಕ್ಕೆ ಮುನ್ನ ಅದಮಾರು ಮಠದ ನೂತನ ವೆಬ್ ಸೈಟ್‌ನ್ನು ಅನಾವರಣಗೊಳಿಸಲಾಯಿತು.
ಬೆಂಗಳೂರಿನ ಹಿರಿಯ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಅವರು ಅಭಿವಂದನಾ ಭಾಷಣ ಮಾಡಿದರು. ಪಲಿಮಾರು ಮಠದ ಕಿರಿಯ ಯತಿ ಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ರಾಜ್ಯ ಕಂದಾಯ ಮತ್ತು ಪೌರಾಡಳಿತ ಸಚಿವ ಆರ್.ಅಶೋಕ್, ಜಿಲ್ಲಾಧಿಕಾರಿ ಜಿ.ಜಗದೀಶ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಯು.ಆರ್.ಸಭಾಪತಿ, ನಿವೃತ್ತ ಪೊಲೀಸ್ ಅಧಿಕಾರಿ ಕೆ.ಅಣ್ಣಾಮಲೈ ಉಪಸ್ಥಿತರಿದ್ದರು.
ಪರ್ಯಾಯ ಅದಮಾರು ಮಠದ ಶ್ರೀಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷರಾದ ಕೆ.ರಘುಪತಿ ಭಟ್ ಸ್ವಾಗತಿಸಿದರೆ, ಅಧ್ಯಕ್ಷ ಎಂ.ಬಿ.ಪುರಾಣಿಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪೂರ್ಣಪ್ರಜ್ಞ ಕಾಲೇಜಿನ ಪ್ರಾಧ್ಯಾಪಕರಾದ ಡಾ.ರಮೇಶ್ ಟಿ.ಎಸ್. ಕಾರ್ಯಕ್ರಮ ನಿರೂಪಿಸಿ, ವೈ.ಎನ್.ರಾಮಂದ್ರ ರಾವ್ ವಂದಿಸಿದರು.








