ಪುತ್ತೂರು : ಕಾರು-ಆಕ್ಟೀವಾ-ರಿಕ್ಷಾ ನಡುವೆ ಅಪಘಾತ; ಓರ್ವ ಮೃತ್ಯು

ಪುತ್ತೂರು : ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿಯಲ್ಲಿ ಮಾಣಿ-ಮೈಸೂರು ಹೆದ್ದಾರಿಯಲ್ಲಿ ನಡೆದ ಸರಣಿ ಅಫಘಾತದಲ್ಲಿ ಕೆಎಸ್ಸಾರ್ಟಿಸಿ ಬಸ್ ಚಾಲಕರಾಗಿರುವ ಹೋಂಡಾ ಆಕ್ಟೀವಾ ವಾಹನ ಸವಾರ ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.
ಪುತ್ತೂರು ವಿಭಾಗದ ಕೆಎಸ್ಸಾರ್ಟಿಸಿ ಬಸ್ ಚಾಲಕ, ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಭಕ್ತಕೋಡಿ ನಿವಾಸಿ ಮೋನಪ್ಪ ಗೌಡ (59) ಮೃತಪಟ್ಟವರು.
ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕಾರು ಮುಕ್ರಂಪಾಡಿ ಬಳಿ ಕೆಎಸ್ಸಾರ್ಟಿಸಿ ಡಿಪೋ ಕಡೆಗೆ ಮೋನಪ್ಪ ಗೌಡ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಹೋಂಡಾ ಆಕ್ಟೀವಾ ವಾಹನಕ್ಕೆ ಢಿಕ್ಕಿ ಹೊಡೆದು ಬಳಿಕ ಆಕ್ಟೀವಾದ ಹಿಂಬದಿಯಿಂದ ಬರುತ್ತಿದ್ದ ಅಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿರುವುದಾಗಿ ತಿಳಿದು ಬಂದಿದೆ.
ಕಾರು ಢಿಕ್ಕಿ ಹೊಡೆದ ರಭಸಕ್ಕೆ ಹೋಂಡಾ ಆಕ್ಟೀವಾ ಸವಾರ ಮೋನಪ್ಪ ಗೌಡ ಅವರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯ ಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಸ್ಥಳೀಯರು ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆಯೊಯ್ದಿದ್ದರು. ಆದರೆ ಮೋನಪ್ಪ ಗೌಡ ಅವರು ಆಸ್ಪತ್ರೆ ತಲುಪುವ ವೇಳೆಗಾಗಲೇ ಮೃತಪಟ್ಟಿದ್ದಾರೆ.
ರಿಕ್ಷಾ ಚಾಲಕ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಅಣ್ಣು ಎಂಬವರು ಗಾಯಗೊಂಡಿದ್ದು, ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಮೃತ ಮೋನಪ್ಪ ಗೌಡ ಅವರು ಮೂಲತಃ ಸುಳ್ಯದ ಪಂಜದವರಾಗಿದ್ದು, ಸರ್ವೆ ಗ್ರಾಮದ ಭಕ್ತಕೋಡಿಯಲ್ಲಿ ಜಾಗ ಖರೀದಿ ಮನೆ ಮಾಡಿಕೊಂಡಿದ್ದರು.
ಪುತ್ತೂರು-ಬೆಂಗಳೂರು ಬಸ್ಸಿನ ಚಾಲಕರಾಗಿ ಕೆಲಸ ಮಾಡುತ್ತಿದ್ದ ಅವರು ಕಾಣಿಯೂರು ಆರೋಗ್ಯ ಕೇಂದ್ರ ವ್ಯಾಪ್ತಿಯ ಪುಣ್ಚತ್ತಾರು ಗ್ರಾಮದಲ್ಲಿ ಆರೋಗ್ಯ ಸಹಾಯಕಿಯಾಗಿರುವ ತನ್ನ ಪತ್ನಿ ಗಾಯತ್ರಿ ಅವರ ಅನಾರೋಗ್ಯದ ಹಿನ್ನಲೆಯಲ್ಲಿ ಕಳೆದ ಕೆಲವು ಸಮಯದಿಂಚೆಗೆ ಪುತ್ತೂರು ಕೆಎಸ್ಸಾರ್ಟಿಸಿ ಡಿಪ್ಪೋದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬುಧವಾರ ರಾತ್ರಿ ಕರ್ತವ್ಯವಿದ್ದ ಹಿನ್ನಲೆಯಲ್ಲಿ ಅವರು ಬುಧವಾರ ಸಂಜೆ ಆಕ್ಟೀವಾ ಹೋಂಡಾದಲ್ಲಿ ಕೆಎಸ್ಸಾರ್ಟಿಸಿ ಡಿಪ್ಪೋಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







