ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಕುಟುಂಬಕ್ಕೆ ಬಿಬಿಎಂಪಿಯಿಂದ 10 ಲಕ್ಷ ರೂ. ವಿತರಣೆ

ಬೆಂಗಳೂರು, ಜ.8: ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮದ್ ಹಾಗೂ ಅವರ ಪುತ್ರನ ಚಿಕಿತ್ಸೆಗೆ ನೆರವಾಗುವ ನಿಟ್ಟಿನಲ್ಲಿ ಬುಧವಾರ ಮೇಯರ್ ಗೌತಮ್ ಕುಮಾರ್ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ತೆರಳಿ ನಿಸಾರ್ ಅಹಮದ್ ಕುಟುಂಬ ಸದಸ್ಯರಿಗೆ 10 ಲಕ್ಷ ರೂ. ಚೆಕ್ ನೀಡಿದ್ದಾರೆ.
ಕವಿ ಕೆ.ಎಸ್. ನಿಸಾರ್ ಅಹಮದ್ ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಪುತ್ರನೂ ಕೂಡ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿರುವ ಸೇವೆ ಪರಿಗಣಿಸಿ ಡಿ.31 ರಲ್ಲಿ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ 20 ಲಕ್ಷ ರೂ, ಹಣಕಾಸು ನೆರವು ನೀಡಲು ಸರ್ವಾನುಮತದ ಬೆಂಬಲ ಸೂಚಿಸಿದ್ದರು. ಬುಧವಾರ ನಿಸಾರ್ ಅಹಮದ್ ಅವರ ಪುತ್ರ ನವೀದ್ ಚಿಕಿತ್ಸೆಗೆ ತುರ್ತು ಹಣದ ಅವಶ್ಯಕತೆ ಉಂಟಾಗಿದ್ದರಿಂದ 10 ಲಕ್ಷ ರೂ. ನೆರವನ್ನು ಬುಧವಾರ ನೀಡಲಾಗಿದೆ.
ತುರ್ತು ಚಿಕಿತ್ಸೆ ಹಿನ್ನೆಲೆ 10 ಲಕ್ಷ ರೂ. ನೆರವು ನೀಡಿದ್ದು, ಉಳಿದ 10 ಲಕ್ಷ ರೂ. ಗಳನ್ನು ಶೀಘ್ರದಲ್ಲಿ ನೀಡಲಾಗುವುದು. ಅವರ ಸೇವೆ ಅಗಾಧವಾಗಿದ್ದು ನಾವು ಅವರಿಗೆ ನಮ್ಮ ಅಲ್ಪ ಕಾಣಿಕೆ ನೀಡುತ್ತಿದ್ದೇವೆ. ನಿಸಾರ್ ಅಹಮದ್ ಮತ್ತು ಅವರ ಪುತ್ರ ಶೀಘ್ರ ಗುಣಮುಖರಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನಷ್ಟು ಸೇವೆ ನೀಡಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಚೆಕ್ ವಿತರಣೆ ವೇಳೆ ಉಪಮೇರ್ ರಾಮಮೋಹನರಾಜು, ಮಾಜಿ ಉಪಮೇಯರ್ ಎಲ್. ಶ್ರೀನಿವಾಸ್ ಉಪಸ್ಥಿತರಿದ್ದರು.







