ದೀಪಿಕಾ ಪಡುಕೋಣೆಗೆ ಬಾಲಿವುಡ್ ಸೆಲೆಬ್ರಿಟಿಗಳ ಬೆಂಬಲ

ಹೊಸದಿಲ್ಲಿ, ಜ. 8: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಮುಸುಕುಧಾರಿ ದುಷ್ಕರ್ಮಿಗಳಿಂದ ಹಲ್ಲೆಗೀಡಾದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಲು ಜೆಎನ್‌ಯುಗೆ ಮಂಗಳವಾರ ಭೇಟಿ ನೀಡಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಬಗ್ಗೆ ಬಾಲಿವುಡ್ ನಟ-ನಟಿಯರು ಶ್ಲಾಘಿಸಿದ್ದಾರೆ.
ದೀಪಿಕಾ ಪಡುಕೋಣೆ ಐಶೆ ಘೋಷ್‌ಗೆ ಕೈಮುಗಿದು ನಮಿಸುತ್ತಿರುವ ಸಂಪೂರ್ಣ ಚಿತ್ರ ಬಹಳ ಬಲವಾದ ಸಂದೇಶವನ್ನು ನೀಡುತ್ತದೆ. ಅಲ್ಲದೆ, ಇದು ಕೇವಲ ಬೆಂಬಲ ವ್ಯಕ್ತಪಡಿಸುವ ಸಂದೇಶ ಮಾತ್ರವಲ್ಲ. ಬದಲಾಗಿ ಇದು ‘‘ನಿಮ್ಮ ನೋವು ನನಗೆ ಅರ್ಥ ಆಗುತ್ತದೆ’’ ಎಂದು ಹೇಳಿದಂತಿದೆ ಎಂದು ಚಿತ್ರನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿದ್ದಾರೆ. ದೀಪಿಕಾ ಪಡುಕೋಣೆ ಹಾಗೆ ಮಾಡಿರುವುದರಿಂದ ಪ್ರತಿಯೊಬ್ಬರಿಗೆ ಧೈರ್ಯ ಉಂಟಾಗಿದೆ. ಇನ್ನು ಮುಂದೆ ನಾವು ಭಯಪಡಬೇಕಾಗಿಲ್ಲ. ದೇಶದಲ್ಲಿ ನಿಜವಾಗಿಯೂ ಭಯದ ವಾತಾವರಣ ಇದೆ. ಆದರೆ, ದೀಪಿಕಾ ಪಡುಕೋಣೆ ಅವರು ಈ ಭಯವನ್ನು ನಿವಾರಿಸಿದ್ದಾರೆ. ಆ ಕಾರಣಕ್ಕಾಗಿಯೇ ಅವರ ಚಿತ್ರ ಪ್ರಭಾವಶಾಲಿ ಎಂದು ಕಶ್ಯಪ್ ತಿಳಿಸಿದ್ದಾರೆ.
“ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನೆಗೆ ಧ್ವನಿಗೂಡಿಸಿದ ದೀಪಿಕಾ ಪಡುಕೋಣೆ ಅವರಿಗೆ ನಾನು ಅಪಾರ ಗೌರವ ನೀಡುತ್ತೇನೆ. ಜೆಎನ್‌ಯುನಲ್ಲಿ ಹಲ್ಲೆಗೊಳಗಾದವರು ಎಡಪಂಥೀಯ ವಿದ್ಯಾರ್ಥಿಗಳು ಎಂಬ ಬಗ್ಗೆ ಎರಡು ಮಾತಿಲ್ಲ” ಎಂದು ರಣವೀರ್ ಶೊರೆ ಹೇಳಿದ್ದಾರೆ. ದೀಪಿಕಾ ಪಡುಕೋಣೆಯ ಸಹ ನಟ ವಿಕ್ರಾಂತ್ ಮೆಸ್ಸೆ ‘ಚಪಾಕ್’ ಚಿತ್ರದ ಪ್ರಮೋಷನ್‌ಗಾಗಿ ದಿಲ್ಲಿಯಲ್ಲಿದ್ದರು. ಅವರು ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ, ದೀಪಿಕಾ ಪಡುಕೋಣೆಯವರ ಭಾವಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರೊಂದಿಗೆ ‘‘ಹೆಮ್ಮೆಯಿಂದ ಹೃದಯ ತುಂಬಿದೆ’’ ಎಂದು ಹೇಳಿದ್ದಾರೆ.
ನಟಿ ಕೊಂಕಣ ಶರ್ಮಾ ‘ಗೌರವ’ ಎಂದು ಟ್ವೀಟ್ ಮಾಡಿದ್ದಾರೆ. ನಿರ್ಮಾಪಕ ಹಾಗೂ ನಿರ್ದೇಶಕ ನಿಖಿಲ್ ಅಡ್ವಾನಿ ಅವರು ಶ್ಲಾಘಿಸಿದ್ದಾರೆ. ದೀಪಿಕಾ ಪಡುಕೋಣೆ ನಿರ್ಮಾಪಕರಾಗಿಯೂ ಚಿತ್ರದ ಪ್ರಿವ್ಯೆಹ್‌ಗೆ ಸಿನೆಮಾ ಮಂದಿರದ ಎದುರು ನಿಲ್ಲುವ ಬದಲು ಪ್ರತಿಭಟನೆಯಲ್ಲಿ ನಿಲ್ಲುವುದುನ್ನು ಆಯ್ಕೆ ಮಾಡಿಕೊಂಡರು ಎಂದಿದ್ದಾರೆ. ಇದರೊಂದಿಗೆ ನಟಿ ಶಬನಾ ಅಝ್ಮಿ, ಚಿತ್ರ ನಟ ಪ್ರಕಾಶ್ ರಾಜ್ ಕೂಡ ದೀಪಿಕಾ ಪಡುಕೋಣೆ ಅವರಿಗೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.







