ವಿದ್ಯಾರ್ಥಿಗಳೊಂದಿಗೆ ಹೆಚ್ಚಿನ ಸಂವಹನ: ಜೆಎನ್‌ಯು ಕುಲಪತಿಗೆ ಸಚಿವಾಲಯ ಸಲಹೆ
ಹೊಸದಿಲ್ಲಿ, ಜ.8: ವಿದ್ಯಾರ್ಥಿಗಳೊಂದಿಗೆ ಇನ್ನಷ್ಟು ಹೆಚ್ಚಿನ ಸಂವಹನ ನಡೆಸುವುದರ ಜೊತೆಗೆ ಅಧ್ಯಾಪಕ ವರ್ಗದವರನ್ನು ವಿಶ್ವಾಸಕ್ಕೆ ಪಡೆಯುವಂತೆ ಮತ್ತು ಸೆಮಿಸ್ಟರ್ ನೋಂದಣಿ ಪ್ರಕ್ರಿಯೆಗೆ ವ್ಯವಸ್ಥೆ ಮಾಡುವಂತೆ ಜೆಎನ್‌ಯು ಕುಲಪತಿ ಎಂ ಜಗದೀಶ್ ಕುಮಾರ್‌ಗೆ ಮಾನವ ಸಂಪನ್ಮೂಲ ಸಚಿವಾಲಯ ಬುಧವಾರ ಸಲಹೆ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕುಲಪತಿ, ಆಸಕ್ತ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ನೋಂದಣಿಗೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.
ವಿವಿಯ ಕ್ಯಾಂಪಸ್‌ನಲ್ಲಿ ತಮ್ಮ ಮೇಲೆ ದಾಳಿ ನಡೆಯುತ್ತಿದ್ದರೂ ಕುಲಪತಿ ತಕ್ಷಣ ಕ್ರಮ ಕೈಗೊಳ್ಳಲಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅಮಿತ್ ಖರೆ ಮತ್ತು ಜಿಸಿ ಹೊಸೂರ್ ಬುಧವಾರ ಕುಲಪತಿಯೊಂದಿಗೆ ಸಭೆ ನಡೆಸಿ ಚರ್ಚಿಸಿದ್ದರು. ಸಂವಹನದಲ್ಲಿ ಕೊರತೆಯಿದ್ದರೆ ಅನವಶ್ಯಕ ಸಂದೇಹಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಹೆಚ್ಚು ಸಂವಹನಕ್ಕೆ ಆದ್ಯತೆ ನೀಡಬೇಕು. ಜೆಎನ್‌ಯು ಪ್ರಮುಖ ವಿವಿಯಾಗಿದ್ದು ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿರುವ ಗೌರವವನ್ನು ಉಳಿಸಿಕೊಳ್ಳಬೇಕು. ಅಲ್ಲದೆ ಸೆಮಿಸ್ಟರ್ ನೋಂದಣಿ ಪ್ರಕ್ರಿಯೆ ಸುಗಮವಾಗಿ ನಡೆಯಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡಿದರು.
ಸುಮಾರು ಎರಡೂವರೆ ಗಂಟೆ ನಡೆದ ಸಭೆಯ ಬಳಿಕ ಟ್ವೀಟ್ ಮಾಡಿರುವ ಕುಲಪತಿ, ಜೆಎನ್‌ಯು ವಿವಿಯಲ್ಲಿ ಸಹಜ ಸ್ಥಿತಿ ನೆಲೆಸುವಂತಾಗಲು ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದ್ದೇನೆ . ಅಲ್ಲದೆ ನೋಂದಣಿ ಪ್ರಕ್ರಿಯೆ ವಿರೋಧಿಸಿ ಕಳೆದ ವಾರ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆ ಸಂದರ್ಭ ಹಾನಿಗೊಳಗಾಗಿದ್ದ ಸಂವಹನ ಮತ್ತು ಮಾಹಿತಿ ವ್ಯವಸ್ಥೆಯನ್ನು ದುರಸ್ತಿಗೊಳಿಸಲಾಗಿದ್ದು ಈಗ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ. ಸೆಮಿಸ್ಟರ್ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವ (ದಂಡ ಶುಲ್ಕವಿಲ್ಲದೆ) ಅಂತಿಮ ದಿನವನ್ನು ಜನವರಿ 15ರವರೆಗೆ ವಿಸ್ತರಿಸಲಾಗಿದೆ. ಈ ಕಾರಣದಿಂದ ಸುಮಾರು 3,300 ವಿದ್ಯಾರ್ಥಿಗಳು ಆನ್‌ಲೈನ್ ನೋಂದಣಿಗೆ ಶುಲ್ಕ ಪಾವತಿಸಿದ್ದಾರೆ ಎಂದವರು ತಿಳಿಸಿದ್ದಾರೆ.







