ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕೂಡಲೇ ಅನುದಾನ ಬಿಡುಗಡೆ ಮಾಡಿ: ಗೌಸ್ ಮೊಹಿದ್ದೀನ್

ಚಿಕ್ಕಮಗಳೂರು, ಜ.8: ಕಸಾಪ ವತಿಯಿಂದ ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಜ.10-11ರಂದು ನಡೆಯುವ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕೆಲ ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಸಂಘಟನೆಗಳು ಬೆದರಿಕೆ ಹಾಕಿರುವುದು ಸರಿಯಲ್ಲ. ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ಅವರು ಸಮ್ಮೇಳನಕ್ಕೆ ಅನುದಾನ ತಡೆ ಹಿಡಿಯಲು ಅನುದಾನ ಅವರ ಸ್ವಂತದ್ದಲ್ಲ. ಕೂಡಲೇ ಅವರು ಅನುದಾನ ಬಿಡುಗಡೆ ಮಾಡಬೇಕು ಎಂದು ಸಂವಿಧಾನ ಉಳಿವಿಗಾಗಿ ಕರ್ನಾಟಕ ವೇದಿಕೆ ಆಗ್ರಹಿಸಿದೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪ ಕಾರ್ಯಕಾರಿ ಮಂಡಳಿ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳದ ಅಧ್ಯಕ್ಷರನ್ನಾಗಿ ಹೋರಾಟಗಾರ, ಪರಿಸರವಾದಿ, ಸಾಹಿತಿ ಕಲ್ಕುಳಿ ವಿಠಲ್ ಹೆಗ್ಡೆ ಅವರನ್ನು ಆಯ್ಕೆ ಮಾಡಿರುವುದು ಔಚಿತ್ಯಪೂರ್ಣವಾಗಿದ್ದು, ಆ ಸ್ಥಾನಕ್ಕೆ ಅವರು ಎಲ್ಲ ರೀತಿಯಿಂದಲೂ ಸಮರ್ಥರಿದ್ದಾರೆ. ಕಸಾಪ ಯಾವುದೇ ಕಾರಣಕ್ಕೂ ಅವರನ್ನು ಬದಲಾಯಿಸುವುದು, ಇಲ್ಲವೇ ಸಮ್ಮೇಳನ ಮುಂದೂಡಬಾರದು. ಸಮಾಜದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಸಹಜ. ಈ ಕಾರಣಕ್ಕೆ ಕುಂಟು ನೆಪವೊಡ್ಡಿ ಕನ್ನಡಿಗೆ ಹಬ್ಬವಾಗಿರುವ ಸಾಹಿತ್ಯ ಸಮ್ಮೇಳನಕ್ಕೆ ವಿರೋಧ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ ಎಂದು ಅವರು ಹೇಳಿದರು.
ಮಲೆನಾಡಿನ ನೈಜ ಪರಿಸರವಾದಿಗಳಲ್ಲಿ ಕಲ್ಕುಳಿ ವಿಠಲ್ ಹೆಗ್ಡೆ ಅವರು ಮೊದಲ ಸಾಲಿನಲ್ಲಿ ನಿಲ್ಲುವವರು. ಸಮಾಜಮುಖಿ ಚಿಂತಕರಾಗಿರುವ ಅವರು ಕುದುರೆಮುಖ ಗಣಿಗಾರಿಕೆ ಹೋರಾಟ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಹೋರಾಟಗಳ ಮೂಲಕ ಅಲ್ಲಿನ ಜನರನ್ನು ಕಾಡಿನಿಂದ ಹೊರ ಹಾಕುವ ಸರಕಾರದ ಸಂಚಿನ ವಿರುದ್ಧ ಹೋರಾಟ ನಡೆಸಿದ ಪರಿ ಸಮಾಜಕ್ಕೆ ಮಾದರಿಯಾಗಿದೆ. ಮಲೆನಾಡಿನ ಜನರ ಬದುಕಿಗೆ ತೊಂದರೆಯಾದಾಗ ಅವರು ಸರಕಾರಗಳನ್ನು ಎದುರು ಹಾಕಿಕೊಂಡು ಹೋರಾಟಕ್ಕಿಳಿದು ಯಶಸ್ವಿಯಾಗಿದ್ದಾರೆ. ಮಲೆನಾಡಿನ ಮಣ್ಣಿನ ಬದುಕನ್ನು ಮಂಗನಬ್ಯಾಟೆ ಕೃತಿ ಮೂಲಕ ಇಡೀ ನಾಡಿಗೆ ಅವರು ಪರಿಚಯ ಮಾಡಿಕೊಟ್ಟಿದ್ದಾರೆ. ಈ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಇಂತಹ ಹೋರಾಟಗಾರ ಸಾಹಿತಿ ಸಮ್ಮೇಳನದ ಅಧ್ಯಕ್ಷರಾಗಿರುವುದು ಮಲೆನಾಡಿಗರ ಹೆಮ್ಮೆಯಾಗಿದೆ. ಸಮ್ಮೇಳನ ಅವರ ಅಧ್ಯಕ್ಷತೆಯಲ್ಲೇ ನಡೆಯಬೇಕೆಂದು ಅವರು ಆಗ್ರಹಿಸಿದರು.
ಕೆಲ ಪಟ್ಟಭದ್ರರು ನಕ್ಸಲ್ ಬೆಂಬಲಿಗೆ ಎಂದು ಹಣೆಪಟ್ಟಿ ಹಚ್ಚಿ ಅವರ ತೇಜೋವಧೆಗಿಳಿದುರುವುದು ನಾಚಿಗೆಗೇಡು. ಸಮ್ಮೇಳನದ ವೇದಿಕೆಗೆ ನುಗ್ಗುವ ಬೆದರಿಕೆ ಹಾಕಿರುವುದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಯಾಗಿದೆ. ಜಿಲ್ಲಾಡಳಿತ ಇಂತಹ ಬೆದರಿಕೆಗಳಿಗೆ ಸೊಪ್ಪು ಹಾಕದೇ ಸಮ್ಮೇಳನದ ಯಶಸ್ವಿಗೆ ಸಹಕಾರ ನೀಡಬೇಕು. ಪೊಲೀಸ್ ಇಲಾಖೆ ಸಮ್ಮೇಳನಕ್ಕೆ ಬೆದರಿಕೆ ಇರುವ ಕಾರಣಕ್ಕೆ ವ್ಯಾಪಕ ಭದ್ರತೆ ಒದಗಿಸಬೇಕು. ಕೇಂದ್ರ ಸಾಹಿತ್ಯ ಪರಿಷತ್ ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡಿ ಕಸಾಪ ಸ್ವಾಯತ್ತಾ ಸಂಸ್ಥೆ, ರಾಜಕಾರಣಿಗಳ, ಸರಕಾರದ ಹಸ್ತಕ್ಷೇಪ ಇಲ್ಲಿ ಸಾಧ್ಯವಿಲ್ಲ ಎಂಬುದನ್ನು ಸಾಬೀತು ಮಾಡಬೇಕೆಂದು ಆಗ್ರಹಿಸಿದ ಅವರು, ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಆಗುವುದನ್ನು ತಡೆ ಹಿಡಿದಿರುವ ಸಿ.ಟಿ.ರವಿ ಅವರ ನಡೆಯನ್ನು ಸಂಘಟನೆ ಖಂಡಿಸುತ್ತದೆ ಎಂದರು.
ಸಮ್ಮೇಳದ ಯಶಸ್ವಿಗೆ ಸಂಘಟನೆ ಎಲ್ಲ ರೀತಿಯ ಸಹಕಾರ ನೀಡಲಿದೆ. ಸಮ್ಮೇಳನಕ್ಕೆ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಸಾವಿರಾರು ಸಾಹಿತ್ಯಾಭಿಮಾನಿಗಳು ಆಗಮಿಸಲಿದ್ದಾರೆ. ಸಮ್ಮೇಳನದ ವೇಳೆ ಅಡ್ಡಿ,ಬೆದರಿಕೆ ಹಾಕುವುದನ್ನು ಸಂಘಟನೆ ಸಹಿಸುವುದಿಲ್ಲ ಎಂದು ಇದೇ ವೇಳೆ ಅವರು ಎಚ್ಚರಿಕೆ ನೀಡಿದ್ದಾರೆ.
ಗೋಷ್ಠಿಯಲ್ಲಿ ಮುಖಂಡರಾದ ಕೃಷ್ಣಮೂರ್ತಿ, ಗೌಸ್ ಮುನೀರ್, ವಸಂತ್ ಕುಮಾರ್, ಹಸನಬ್ಬ, ಅಮ್ಜದ್, ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.







