ಮೌಲ್ಯಾಂಕನ ಪರೀಕ್ಷೆ ಕೈಬಿಡಲು ಆಗ್ರಹ: ಶಿಕ್ಷಣ ಸಚಿವ ಸುರೇಶ್ ಕುಮಾರ್‌ಗೆ ಪತ್ರ

ಬೆಂಗಳೂರು, ಜ. 8: ಏಳನೆ ತರಗತಿ ಪಬ್ಲಿಕ್ ಪರೀಕ್ಷೆ ಕೈಬಿಡುವ ತೀರ್ಮಾನದ ಜತೆಗೆ ಮೌಲ್ಯಾಂಕನ ಪರೀಕ್ಷೆಯ ನಿರ್ಧಾರವನ್ನು ಕೈಬಿಡಬೇಕು. ಈ ಸಂಬಂಧ ಶಿಕ್ಷಣ ತಜ್ಞರ ಸಮಿತಿ ರಚಿಸಿ ವರದಿ ಪಡೆದು ಶಿಕ್ಷಣ ವ್ಯವಸ್ಥೆಗೆ ಪೂರಕ ತೀರ್ಮಾನ ಕೈಗೊಳ್ಳಬೇಕು ಎಂದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಆಗ್ರಹಿಸಿದ್ದಾರೆ.
ಬುಧವಾರ ರಮೇಶ್‌ಬಾಬು ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್‌ಗೆ ಪತ್ರ ಬರೆದಿದ್ದು, ಏಳನೆ ತರಗತಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಾಲಿನಲ್ಲಿ ಪಬ್ಲಿಕ್ ಪರೀಕ್ಷೆ ಕೈಬಿಡುವ ತೀರ್ಮಾನ ಸರಿಯಾಗಿದೆ. ಮೌಲ್ಯಾಂಕನ ಪರೀಕ್ಷೆಯು ಅವೈಜ್ಞಾನಿಕವಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪ್ರಸಕ್ತ ಸಾಲಿನಲ್ಲಿ ಜಾರಿ ಮಾಡಬಾರದು ಎಂದು ಕೋರಿದ್ದಾರೆ.
ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಹಾಗೂ ಕೇಂದ್ರ ಪಠ್ಯ ಶಿಕ್ಷಣದ ಶಾಲೆಗಳು ರಾಜ್ಯದಲ್ಲಿವೆ. ಏಕ ರೀತಿಯ ಪಠ್ಯಕ್ರಮವನ್ನು ಅಳವಡಿಸದೆ ಏಳನೆ ತರಗತಿಗೆ ಪಬ್ಲಿಕ್ ಪರೀಕ್ಷೆ ಅಥವಾ ಮೌಲ್ಯಾಂಕನ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ರಮೇಶ್ ಬಾಬು ಅಭಿಪ್ರಾಯಪಟ್ಟಿದ್ದಾರೆ.





