ಜ.14ಕ್ಕೆ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ
ಬೆಂಗಳೂರು, ಜ.8: ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ವತಿಯಿಂದ ಜ.14 ರಂದು ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು, ಅಂದೇ, ಉತ್ತರ ಕರ್ನಾಟಕ ಸಮಗ್ರ ನೀರಾವರಿಗೆ ಒತ್ತಾಯಿಸಿ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಬುಧವಾರ ನಗರದಲ್ಲಿ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 10ನೇ ಬಸವ ಕೃಷಿ ಸಂಕ್ರಾಂತಿ ಕಾರ್ಯಕ್ರಮವನ್ನು ಬಾಗಲಕೋಟೆಯ ಕೂಡಲ ಸಂಗಮದ ಬಸವ ವೇದಿಕೆ ಸಭಾಭವನದಲ್ಲಿ ಆಯೋಜಿಸಲಾಗಿದ್ದು, ಪ್ರಸಕ್ತ ಸಾಲಿನ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಗೆ ತೆಲಂಗಾಣ ಸರಕಾರದ ಜಲಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶ್ ರಾವ್ ವೀರಮಲ್ಲ ಆಯ್ಕೆಯಾಗಿದ್ದಾರೆ ಎಂದರು.
ವಿಶ್ವದ ಅತಿ ದೊಡ್ಡ ಕಾಳೇಶ್ವರ ಏತನೀರಾವರಿ ಹರಿಕಾರ ಮಿಷನ್ ಭಗೀರಥ ಕುಡಿಯುವ ನೀರಿನ ರೂವಾರಿ ಹಾಗೂ ರೈತ ಹಕ್ಕುಗಳ ಹೋರಾಟಗಾರ ಪ್ರಕಾಶ್‌ರಾವ್ ವೀರಮಲ್ಲ ಅವರ ಸಾಧನೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಈಗಾಗಲೇ ಈ ಪ್ರಶಸ್ತಿಯನ್ನು ಜಲತಜ್ಞ ಡಾ.ರಾಜೇಂದ್ರಸಿಂಗ್, ಅಣ್ಣಾ ಹಜಾರೆ, ಮೇಧಾ ಪಾಟ್ಕರ್, ಡಾ.ಬಾಬಾ ಅಡಾವ, ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಹಾಗೂ ಡಾ.ಎಂ.ಎಸ್.ಸ್ವಾಮಿನಾಥನ್ ಅವರಿಗೆ ಪ್ರದಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಮುರುಗೇಶ್ ನಿರಾಣಿ, ಶಿವಾನಂದ ಪಾಟೀಲ್, ಬಸನಗೌಡ ಪಾಟೀಲ್, ಎಂ.ಬಿ. ಪಾಟೀಲ್, ಮಾಜಿ ಸಚಿವ ವಿನಯ್ ಕುಲಕರ್ಣಿ, ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ ಎಂದರು.







