2019ರಲ್ಲಿ ಪ್ರಾಕೃತಿಕ ವಿಕೋಪದಿಂದ 1,630 ಜನರ ಸಾವು

ಹೊಸದಿಲ್ಲಿ, ಜ.8: 1901ನೇ ಇಸವಿಯಿಂದ ಇದುವರೆಗಿನ ತಾಪಮಾನವನ್ನು ಹೋಲಿಸಿದರೆ ಭಾರತದಲ್ಲಿ 2019ನೇ ವರ್ಷ 7ನೇ ಅತ್ಯಂತ ಗರಿಷ್ಠ ಉಷ್ಣತೆಯ ವರ್ಷವಾಗಿದ್ದು ಕಳೆದ ದಶಕ ಅತ್ಯಂತ ಉಷ್ಣತೆಯ ಅವಧಿಯಾಗಿದೆ . 2019ರಲ್ಲಿ ಸರಾಸರಿ ತಾಪಮಾನ ಸಾಮಾನ್ಯ ಮಟ್ಟಕ್ಕಿಂತ 0.36 ಡಿಗ್ರಿ ಸೆಲ್ಶಿಯಸ್‌ನಷ್ಟು ಅಧಿಕವಾಗಿತ್ತು ಮತ್ತು ಪ್ರಾಕೃತಿಕ ವಿಕೋಪದಿಂದ ದೇಶದಲ್ಲಿ 1,630 ಮಂದಿ ಮೃತಪಟ್ಟಿದ್ದಾರೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.
2019ರಲ್ಲಿ 8 ಚಂಡಮಾರುತ ದಾಖಲಾಗಿದ್ದು ಇದರಲ್ಲಿ 5 ಅರಬ್ಬಿ ಸಮುದ್ರದಲ್ಲಿ ಉಂಟಾಗಿದೆ. ಅರಬ್ಬಿ ಸಮುದ್ರದಲ್ಲಿ ಸಾಮಾನ್ಯವಾಗಿ ವರ್ಷಕ್ಕೆ ಒಂದು ಚಂಡಮಾರುತ ಉಂಟಾಗುತ್ತದೆ. 1902ರ ಬಳಿಕದ ಅತ್ಯಂತ ಗರಿಷ್ಟ ಸಂಖ್ಯೆಯ ಚಂಡಮಾರುತ 2019ರಲ್ಲಿ ದಾಖಲಾಗಿದೆ. ಹಿಮಪಾತ, ನೆರೆಹಾವಳಿ, ಬಿಸಿಗಾಳಿ, ಬಿರುಗಾಳಿ ಮುಂತಾದ ಹವಾಮಾನ ವೈಪರೀತ್ಯದಿಂದ 2019ರಲ್ಲಿ ಸುಮಾರು 1,630 ಮಂದಿ ಮೃತರಾಗಿದ್ದಾರೆ. ಇದರಲ್ಲಿ ಬಿಸಿಗಾಳಿಯಿಂದ ಮೃತಪಟ್ಟವರ ಸಂಖ್ಯೆ 349 ಆಗಿದ್ದು ಬಿಹಾರದಲ್ಲೇ 292 ಮಂದಿ ಸಾವನ್ನಪ್ಪಿದ್ದಾರೆ. 2019ರಲ್ಲಿ ಬಿಹಾರದಲ್ಲಿ ಹವಾಮಾನ ವೈಪರೀತ್ಯದ ಘಟನೆಯಿಂದ 670 ಮಂದಿ ಸಾವನ್ನಪ್ಪಿದ್ದಾರೆ.
2019ರ 9 ತಿಂಗಳ ಅವಧಿಯಲ್ಲಿ ತಿಂಗಳ ತಾಪಮಾನ ಸಾಮಾನ್ಯಕ್ಕಿಂತ ಅಧಿಕವಾಗಿತ್ತು. 2016ನೇ ವರ್ಷ ಅತ್ಯಂತ ಉಷ್ಣತೆಯ ವರ್ಷವಾಗಿದ್ದರೆ, ದೇಶದಲ್ಲಿ ದಾಖಲಾಗಿರುವ 15 ಗರಿಷ್ಟ ಉಷ್ಣತೆಯಲ್ಲಿ 11 ಗರಿಷ್ಟ ಉಷ್ಣತೆಯ ಪ್ರಕರಣ ಕಳೆದ 15 ವರ್ಷಗಳಲ್ಲಿ ದಾಖಲಾಗಿದೆ. 2019ರಲ್ಲಿ ವಾರ್ಷಿಕ ಮಳೆ 1961-2010ರ ಸರಾಸರಿ 109%ದಷ್ಟು ಆಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.





