ಸಿಎಎ-ಎನ್‌ಆರ್‌ಸಿ ವಿರುದ್ಧ ಮುಂಬೈನಿಂದ ಯಾತ್ರೆ ಆರಂಭಿಸಿದ ಯಶವಂತ ಸಿನ್ಹಾ

ಮುಂಬೈ,ಜ.9: ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ಅವರು ಗುರುವಾರ ಇಲ್ಲಿಯ ಗೇಟ್ ವೇ ಆಫ್ ಇಂಡಿಯಾದಿಂದ ‘ಗಾಂಧಿ ಶಾಂತಿ ಯಾತ್ರೆ’ಯನ್ನು ಆರಂಭಿಸಿದರು. 3,000 ಕಿ.ಮೀ.ದೂರದ ಈ ಯಾತ್ರೆಯು ಐದು ರಾಜ್ಯಗಳ ಮೂಲಕ ಸಾಗಲಿದ್ದು,ಮಹಾತ್ಮಾ ಗಾಂಧಿಯವರ ಜನ್ಮದಿನವಾದ ಜ.30ರಂದು ಅವರ ಸ್ಮಾರಕವಿರುವ ದಿಲ್ಲಿಯ ರಾಜಘಾಟ್‌ನ್ನು ತಲುಪಲಿದೆ.
ಯಾತ್ರೆಗೆ ಚಾಲನೆ ನೀಡಿದ ಎನ್‌ಸಿಪಿ ಅಧ್ಯಕ್ಷ ಶರದ ಪವಾರ್ ಅವರು,ಕೇಂದ್ರ ಸರಕಾರವು ಸರ್ವಾಧಿಕಾರಿ ನೀತಿಗಳನ್ನು ಅನುಸರಿಸುತ್ತಿದ್ದು,ಇದಕ್ಕೆ ಮಹಾತ್ಮಾ ಗಾಂಧಿಯವರ ಅಹಿಂಸಾತ್ಮಕ ಮಾರ್ಗಗಳ ಮೂಲಕ ಉತ್ತರಿಸಬೇಕಾದ ಅಗತ್ಯವಿದೆ ಎಂದರು.
ಜೆಎನ್‌ಯುದಲ್ಲಿ ನಡೆದ ಹಿಂಚಾಚಾರವನ್ನು ದೇಶಾದ್ಯಂತ ವಿರೋಧಿಸಲಾಗುತ್ತಿದೆ ಎಂದ ಅವರು,ಸಿಎಎ ಮತ್ತು ಎನ್‌ಆರ್‌ಸಿ ಕುರಿತಂತೆ ಭಾರತದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಸರಕಾರದ ಧೋರಣೆಯಿಂದ ನಿರಾಶರಾಗಿರುವ ಜನರು ಭಾರೀ ಸಂಖ್ಯೆಯಲ್ಲಿ ಬೀದಿಗಿಳಿದಿದ್ದಾರೆ. ಅವರಿಗೆ ಸರಿಯಾದ ಮಾರ್ಗವನ್ನು ತೋರಿಸಬೇಕಿದೆ ಮತ್ತು ಅದು ಸಂವಿಧಾನವನ್ನು ರಕ್ಷಿಸಬಲ್ಲ ಗಾಂಧೀಜಿಯವರ ಅಹಿಂಸಾತ್ಮಕ ಮಾರ್ಗವಾಗಿದೆ ಎಂದರು.
ಸಿಎಎ ರದ್ದುಗೊಳಿಸಬೇಕು,ಜೆಎನ್‌ಯುದಂತಹ ಸರಕಾರಿ ಪ್ರಾಯೋಜಕತ್ವದ ಹಿಂಸಾಚಾರದ ಘಟನೆಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ರಾಷ್ಟ್ರವ್ಯಾಪಿ ಎನ್‌ಆರ್‌ಸಿಯನ್ನು ಕೈಗೊಳ್ಳುವುದಿಲ್ಲ ಎಂದು ಸರಕಾರವು ಸಂಸತ್ತಿನಲ್ಲಿ ಭರವಸೆ ನೀಡಬೇಕು ಎಂಬ ಬೇಡಿಕೆಗಳೊಂದಿಗೆ ಯಾತ್ರೆಯನ್ನು ಕೈಗೊಳ್ಳುತ್ತಿರುವುದಾಗಿ ಸಿನ್ಹಾ ಬುಧವಾರ ತಿಳಿಸಿದ್ದರು.







