ರಾಷ್ಟ್ರಪತಿ ಭವನಕ್ಕೆ ಜಾಥಾದಲ್ಲಿ ತೆರಳುತ್ತಿದ್ದ ಜೆಎನ್‌ಯು ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ

ಹೊಸದಿಲ್ಲಿ, ಜ.9: ರಾಷ್ಟ್ರಪತಿ ಭವನದತ್ತ ಜಾಥಾದಲ್ಲಿ ತೆರಳುತ್ತಿದ್ದ ಜೆಎನ್‌ಯು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ರವಿವಾರ ಜೆಎನ್‌ಯು ಮೇಲೆ ನಡೆದಿದ್ದ ದಾಳಿಯ ಸಂದರ್ಭ ವಿದ್ಯಾರ್ಥಿಗಳನ್ನು ರಕ್ಷಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಜೆಎನ್‌ಯು ಕುಲಪತಿ ಎಂ ಜಗದೀಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನೂರಾರು ಪ್ರತಿಭಟನಾಕಾರರು ಮಾನವ ಸಂಪನ್ಮೂಲ ಇಲಾಖೆಯ ಕಚೇರಿವರೆಗೆ ಪ್ರತಿಭಟನಾ ಜಾಥಾ ನಡೆಸಿದರು.
ಮಂಡಿ ಹೌಸ್‌ನಿಂದ ಆರಂಭವಾದ ಜಾಥದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.ಸಿಪಿಎಂ ಮುಖಂಡರಾದ ಸೀತಾರಾಮ ಯೆಚೂರಿ, ಡಿ ರಾಜಾ, ಪ್ರಕಾಶ್ ಕಾರಟ್ ಮತ್ತು ಬೃಂದಾ ಕಾರಟ್, ಎಲ್‌ಜೆಡಿ ಮುಖಂಡ ಶರದ್ ಯಾದವ್ ಸಹಿತ ಹಲವು ರಾಜಕೀಯ ಮುಖಂಡರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನಾ ಮೆರವಣಿಗೆಯು ರಾಷ್ಟ್ರಪತಿ ಭವನದತ್ತ ಸಾಗುತ್ತಿದ್ದಂತೆ ದಿಲ್ಲಿ ಪೊಲೀಸರು ತಡೆಯೊಡ್ಡಿದ್ದಾರೆ. ಈ ವೇಳೆ ಘೋಷಣೆ ಕೂಗುತ್ತಾ ವಿದ್ಯಾರ್ಥಿಗಳು ಪೊಲೀಸರನ್ನು ದಾಟಿ ಮುಂದೆ ಸಾಗಲು ಯತ್ನಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.





