ಪಡಿತರ ಚೀಟಿ ಅಕ್ರಮ ತಡೆಗೆ ಇ-ಕೆವೈಸಿ ಕಡ್ಡಾಯ: ಶಶಿಕಲಾ ಜೊಲ್ಲೆ
ಉಡುಪಿ, ಜ.9: ಪಡಿತರ ಚೀಟಿಯಲ್ಲಾಗುತ್ತಿರುವ ಅಕ್ರಮಗಳನ್ನು ತಡೆಗಟ್ಟಲು ಇ-ಕೆವೈಸಿಯನ್ನು ಕಡ್ಡಾಯಗೊಳಿಸಲಾಗಿದ್ದು, ಪಡಿತರ ಚೀಟಿದಾರರು ಇ-ಕೆವೈಸಿ ನೀಡಲು ಮಾರ್ಚ್ 31ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ, ಆಹಾರ ನಾಗರಿಕರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಚಿವೆ ಶಶಿಕಲಾ ಅ ಜೊಲ್ಲೆ ತಿಳಿಸಿದ್ದಾರೆ.
ಗುರುವಾರ ಮಣಿಪಾಲದಲ್ಲಿರುವ ಜಿಪಂನ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಆಹಾರ, ನಾಗರಿಕರ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತಿದ್ದರು.
ಉಡುಪಿ ಜಿಲ್ಲೆಯಲ್ಲಿ ಒಟ್ಟು 28741 ಎಎವೈ ಪಡಿತರ ಚೀಟಿ, 1,61,407 ಪಿಹೆಚ್‌ಹೆಚ್ ಪಡಿತರ ಚೀಟಿಗಳು, 19,169 ಎನ್‌ಪಿಹೆಚ್‌ಹೆಚ್ ಪಡಿತರ ಚೀಟಿಗಳಿವೆ. ಈ ವರ್ಷ ಹೊಸ ಪಡಿತರ ಚೀಟಿಗಾಗಿ 7528 ಅರ್ಜಿ ಸಲ್ಲಿಸಲಾಗಿದ್ದು, 3888 ಅರ್ಜಿ ಗಳನ್ನು ವಿಲೇವಾರಿಗೊಳಿಸಲಾಗಿದೆ. 3640 ಅರ್ಜಿಗಳು ಬಾಕಿ ಉಳಿದಿದ್ದು, ಸರ್ಕಾರಿ ಸೌಲ್ಯಗಳು ಅರ್ಹರಿಗೆ ನೀಡುವ ನಿಟ್ಟಿನಲ್ಲಿ ಅನರ್ಹ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಇದುವರೆಗೆ 1291 ಕಾರ್ಡ್‌ಗಳನ್ನು ಸ್ವಯಂ ಪ್ರೇರಣೆಯಿಂದ ಫಲಾನುವಿಗಳು ಹಿಂದಿರುಗಿಸಿದ್ದು, ನಾಲ್ಕು ಚಕ್ರದ ವಾಹನ ಹೊಂದಿರು ವವರಿಂದ 760 ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದೆ. ಒಟ್ಟು 2051 ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ ಎಂದು ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿದರು.
ಇನ್ನುಳಿದ ಅನರ್ಹ ಪಡಿತರ ಚೀಟಿಯನ್ನು ಸ್ವ-ಪ್ರೇರಣೆಯಿಂದ ರದ್ದು ಗೊಳಿಸುವಂತಾಗಲು ಪ್ರಚಾರದ ಅಗತ್ಯವಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಸಚಿವೆ ಹೇಳಿದರು.
ಉಡುಪಿ ಜಿಲ್ಲೆಯಲ್ಲಿ ಇ-ಕೆವೈಸಿ ದಾಖಲಿಸಲು ಸರ್ವರ್ ಸಮಸ್ಯೆ ತೊಡಕಾಗಿದ್ದು ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಿ ಪರಿಹಾರ ಸೂಚಿಸಲಾಗುವುದು ಹಾಗೂ ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಅವರು ತಿಳಿಸಿದರು. ಜಿಲ್ಲೆಯಲ್ಲಿ ಅನ್ನಬಾಗ್ಯ ಯೋಜನೆಯಡಿ ಕುಚ್ಚಿಗೆ ಅಕ್ಕಿ ನೀಡುವಂತೆ ಶಾಸಕ ರಘುಪತಿ ಭಟ್ ಮನವಿ ಮಾಡಿದರು.
ಜಿಪಂ ಅಧ್ಯಕ್ಷ ದಿನಕರಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಸಿಇಓ ಪ್ರೀತಿ ಗೆಹ್ಲೋಟ್, ಆಹಾರ ಇಲಾಖೆ ಉಪ ನಿರ್ದೇಶಕ ಕುಸುಮಾಧರ್ ಉಪಸ್ಥಿತರಿದ್ದರು.







