ಸಮ್ಮೇಳನ ನಡೆಸಿದರೆ ಕಾನೂನು ರೀತಿಯ ಕ್ರಮ: ಚಿಕ್ಕಮಗಳೂರು ಎಸ್ಪಿ ಎಚ್ಚರಿಕೆ

ಚಿಕ್ಕಮಗಳೂರು, ಜ.9: ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಹಾಗೂ ರಾಜ್ಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಷ್ಟೇ ವಿರೋಧವಿದ್ದರೂ ನಡೆಸಿಯೇ ತೀರುತ್ತೇವೆ ಎಂದು ಜಿಲ್ಲಾ ಕಸಾಪ ಹೇಳುತ್ತಿದ್ದರೆ, ಮತ್ತೊಂದೆಡೆ ಜಿಲ್ಲಾ ಪೊಲೀಸ್ ಇಲಾಖೆ ಸಮ್ಮೇಳನಕ್ಕೆ ಅನುಮತಿ ನೀಡಿಲ್ಲ ಎಂದು ತಿಳಿಸಿದೆ. 'ಅನುಮತಿ ಇಲ್ಲದೇ ನಡೆಸಿದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಸಮ್ಮೇಳನ ಮುಂದೂಡುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ಗೆ ಸೂಚಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಯಲ್ಲಿ ಪರ ವಿರೋಧದ ಭಿನ್ನಾಭಿಪ್ರಾಯಗಳು ಕೇಳಿ ಬರುತ್ತಿವೆ. ಕೆಲ ಸಂಘಟನೆಗಳು ಸಮ್ಮೇಳನ ನಡೆದಲ್ಲಿ ಪ್ರತಿ ಹೋರಾಟ ಮಾಡುತ್ತೇವೆಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ ಶೃಂಗೇರಿ ಪಟ್ಟಣ ಬಂದ್ ಮಾಡುತ್ತೇವೆ ಎಂದೂ ಹೇಳಿದ್ದಾರೆ. ಈ ಸಂಬಂಧ ಹಲವು ದಿನಗಳಿಂದ ಎರಡೂ ಕಡೆಗಳಿಂದ ಪ್ರತಿಭಟನೆ ಹಾಗೂ ಸಮರ್ಥನೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಪೂರ್ಣವಾಗಿ ಅವಲೋಕಿಸಿ ಇಲಾಖೆ ಈ ಸೂಚನೆ ನೀಡಿದೆ ಎಂದು ಹೇಳಿದರು.
ಸಮ್ಮೇಳನ ಆಯೋಜಕರು ಸಮ್ಮೇಳನದ ಮೆರವಣಿಗೆ ಸೇರಿದಂತೆ ಸಾರ್ವಜನಿಕ ಸಮಾರಂಭಕ್ಕೆ ಅನುಮತಿ ಕೇಳಿದ್ದಾರೆ. ಅಲ್ಲದೇ ಕೆಲ ಸಂಘಟನೆಗಳ ಮುಖಂಡರು ಬಂದ್ ಆಚರಣೆಗೂ ಅನುಮತಿ ಕೋರಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿ ಕಾನೂನು ಸುವ್ಯವಸ್ಥೆಯ ಹಿನ್ನೆಲೆಯಲ್ಲಿ ಮೆರವಣಿಗೆಗೆ ಹಾಗೂ ಬಂದ್‍ಗೆ ಎರಡಕ್ಕೂ ಯಾವುದೇ ರೀತಿಯ ಅನುಮತಿಯನ್ನು ನೀಡಿಲ್ಲ ಎಂದರು.
ಸಮ್ಮೇಳನದಲ್ಲಿ ನಕ್ಸಲ್ ಚಟುವಟಿಕೆಯಿಂದ ಹೊರ ಬಂದು ಶರಣಾಗಿರುವವರು, ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಪರವಾಗಿರುವವರು ಬರುವ ನಿರೀಕ್ಷೆ ಇದೆ ಎಂದು ಗೊತ್ತಾಗಿದೆ. ಈಗಾಗಲೆ ಸಾಹಿತ್ಯ ಪರಿಷತ್‍ಗೆ ಸಮ್ಮೇಳನವನ್ನು ಮುಂದೂಡಲು ತಿಳಿಸಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘನೆಯಾಗಿ ಸಾರ್ವಜನಿಕರ ಶಾಂತಿಗೆ ಭಂಗವಾದರೆ, ಇದಕ್ಕೆ ಕಾರಣರಾದವರನ್ನು ಹಾಗೂ ಅದಕ್ಕೆ ಪೂರಕವಾಗಿ ವರ್ತಿಸಿ ಪ್ರೇರೇಪಿಸಿದವರ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಇದೇ ವೇಳೆ ಎಚ್ಚರಿಸಿದರು.
ಕಳೆದ ಒಂದು ತಿಂಗಳಿನಿಂದಲೂ ಜಿಲ್ಲಾಡಳಿತ ಶಾಂತಿಯುತವಾಗಿ ಸಮ್ಮೇಳನ ನಡೆಯುವಂತೆ ಪ್ರಯತ್ನಗಳನ್ನು ನಡೆಸಲಾಗಿದೆ. ಈ ಸಂಬಂಧ ಎರಡೂ ಕಡೆಯವರೊಂದಿಗೆ ಮಾತನಾಡಲಾಗಿದೆ. ಅಶ್ಚರ್ಯ ಎಂದರೆ ಎರಡೂ ಗುಂಪಿನವರು ಶಾಂತಿ ಭಂಗ ಆಗದಂತೆ ನೋಡಿಕೊಳ್ಳುವ ಲಿಖಿತ ಭರವಸೆಯನ್ನು ಕೊಡಲು ಮುಂದೆ ಬಂದಿಲ್ಲ. ಇನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ನೀಡಿದ ಮನವಿಗೂ ಲಿಖಿತವಾಗಿಯೇ ಉತ್ತರ ನೀಡಲಾಗಿದೆ. ಆದರೆ ಯಾವುದೇ ರೀತಿಯಲ್ಲಿ ಒಮ್ಮತದಿಂದ ಸಮ್ಮೇಳನ ನಡೆಯುವ ಸೂಚನೆಗಳು ಕಂಡು ಬಾರದಿರುವುದರಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದರು.
ಈ ಸಮ್ಮೇಳನದಲ್ಲಿ ಯಾವ ಗುಂಪಿಗೆ ಗೆಲುವಾಯಿತು ಎಂಬುದು ಮುಖ್ಯವಲ್ಲ. ಇಲ್ಲಿ ಕನ್ನಡ ಸಾಹಿತ್ಯ ಗೆಲ್ಲಬೇಕು. ಇದಕ್ಕೆ ಒಮ್ಮತದ ಸಹಭಾಗಿತ್ವ ಇರಬೇಕು. ಇದು ಜಿಲ್ಲಾಡಳಿತದ ಆಶಯ. ಶಾಂತಿ ಸೌಹಾರ್ದತೆಯನ್ನು ಕಾಪಾಡುವುದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಯಾಗಿ ನನ್ನ ಕರ್ತವ್ಯ. ಅದಕ್ಕೆ ಅಗತ್ಯವಾದ ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಾಹಿತ್ಯ ಸಮ್ಮೇಳನ ಹೊಂದಾಣಿಕೆಯಿಂದ ಜನರ ಸಂತೋಷದೊಂದಿಗೆ ನಡೆಯಬೇಕು. ಜಿಲ್ಲಾಡಳಿತ ಎರಡೂ ಗುಂಪುಗಳನ್ನು ಒಟ್ಟಾಗಿಸಿ ಒಮ್ಮತದ ನಿಲುವು ತೆಗೆದುಕೊಳ್ಳುವಂತೆ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ. ನಕ್ಸಲ್ ವಿರೋಧಿ ಬಣ ಹಾಗೂ ಕನ್ನಡ ಸಾಹಿತ್ಯ ಉಳಿಸಿ ವೇದಿಕೆಗಳು ಸಮ್ಮೇಳನಾಧ್ಯಕ್ಷರ ಮೆರವಣಿಗೆ ಹಾಗೂ ಸಮ್ಮೇಳನ ನಡೆಯುವ ವೇಳೆಯಲ್ಲಿಯೇ ಪ್ರತಿಭಟನಾ ಮೆರವಣಿಗೆ ನಡೆಸಲು ಅನುಮತಿ ಕೋರಿದ್ದರು. ಆದರೆ ಶಾಂತಿ ಕದಡುವ ಸಾಧ್ಯತೆ ಇರುವುದನ್ನು ಮನಗಂಡು ಅದಕ್ಕೂ ಅನುಮತಿ ನೀಡಿಲ್ಲ. ಅದರೊಂದಿಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಶೃಂಗೇರಿ ಬಂದ್‍ಗೆ ಕರೆ ಕೊಟ್ಟಿದ್ದು, ಬಂದ್ ಬೆಂಬಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಸಮ್ಮೇಳನಾಧ್ಯಕ್ಷರ ಆಯ್ಕೆಯನ್ನು ಬೆಂಬಲಿಸುವವರೂ ಸಹ ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರುತ್ತಿದ್ದಾರೆ. ಇದೆಲ್ಲವನ್ನೂ ಪರಿಗಣಿಸಿ ಸಮ್ಮೇಳನವನ್ನು ಮುಂದೂಡುವಂತೆ ಜಿಲ್ಲಾ ಕಸಾಪ ಮುಖಂಡರಿಗೆ ಸೂಚಿಸಲಾಗಿದೆ.
- ಹರೀಶ್ ಪಾಂಡೆ, ಎಸ್ಪಿ







