ನ್ಯುಮೋನಿಯ ತರುವ ಹೊಸ ಮಾದರಿಯ ವೈರಸ್ ಪತ್ತೆ

ಸಾಂದರ್ಭಿಕ ಚಿತ್ರ
ಬೀಜಿಂಗ್, ಜ. 9: ನಿಗೂಢ ನ್ಯುಮೋನಿಯ ಕಾಯಿಲೆಗೆ ಕಾರಣವಾಗಿರುವ ಹೊಸ ಮಾದರಿಯ ವೈರಸ್, ಹತ್ತು ವರ್ಷಗಳಿಗೂ ಹೆಚ್ಚು ಸಮಯದ ಹಿಂದೆ ನೂರಾರು ಜನರ ಸಾವಿಗೆ ಕಾರಣವಾಗಿದ್ದ ‘ಸಾರ್ಸ್’ ವೈರಸ್ ಕುಟುಂಬಕ್ಕೆ ಸೇರಿದ್ದಾಗಿದೆ ಎಂದು ಚೀನಾ ಭಾವಿಸಿದೆ. ಹೊಸ ಮಾದರಿಯ ನ್ಯುಮೋನಿಯ ವೈರಸ್ ಈಗಾಗಲೇ 59 ಮಂದಿಯನ್ನು ಬಾಧಿಸಿದೆ.
ಹೊಸದಾಗಿ ನ್ಯುಮೋನಿಯಕ್ಕೆ ಕಾರಣವಾಗಿರುವುದು ಹೊಸ ಮಾದರಿಯ ಕೊರೋನವೈರಸ್ ಎಂಬ ಪ್ರಾಥಮಿಕ ನಿರ್ಧಾರಕ್ಕೆ ಪರಿಣತರು ಬಂದಿದ್ದಾರೆ ಎಂದು ಪ್ರಧಾನ ವಿಜ್ಞಾನಿ ಕ್ಸು ಜಿಯಾನ್ಗುವೊ ಚೀನಾದ ಅಧಿಕೃತ ಸುದ್ದಿ ಸಂಸ್ಥೆ ಕ್ಸಿನುವಾಗೆ ಹೇಳಿದರು. ಹೊಸ ವೈರಸ್ನ ಅಸ್ತಿತ್ವವನ್ನು ಮಧ್ಯ ಚೀನಾದ ನಗರ ವುಹಾನ್ನಲ್ಲಿ ಡಿಸೆಂಬರ್ 31ರಂದು ಖಚಿತಪಡಿಸಲಾಗಿದೆ.
ಹೊಸ ಮಾದರಿಯ ನ್ಯುಮೋನಿಯವನ್ನು ಆರಂಭದಲ್ಲಿ ಅತ್ಯಂತ ಸಾಂಕ್ರಾಮಿಕ ಹಾಗೂ ವಿನಾಶಕಾರಿ ಸಡನ್ ಆ್ಯಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ (ಸಾರ್ಸ್) ಎಂಬುದಾಗಿ ಭಾವಿಸಲಾಗಿತ್ತು. ಆದರೆ, ಹೊಸದಾಗಿ ಕಾಣಿಸಿಕೊಂಡಿರುವ ನ್ಯುಮೋನಿಯ ಸಾರ್ಸ್ ಅಲ್ಲ ಎಂದು ಚೀನಾ ಸ್ಪಷ್ಟೀಕರಿಸಿದೆ.
ನೂತನ ಕೊರೋನವೈರಸ್ ಒಂದನ್ನು ಪತ್ತೆಹಚ್ಚಲಾಗಿದೆ ಎನ್ನುವುದನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ) ಖಚಿತಪಡಿಸಿದೆ.





