‘ಮೈಕ್ರೋಫೈನಾನ್ಸ್ ಸಾಲಗಳಿಗೆ ಋಣಮುಕ್ತ ಕಾಯ್ದೆ ಅನ್ವಯಿಸಲ್ಲ’
ಉಡುಪಿ, ಜ.9: ಕರ್ನಾಟಕ ಸರಕಾರ ಪ್ರಕಟಿಸಿರುವ ಋಣಮುಕ್ತ ಕಾಯ್ದೆ ವ್ಯಾಪ್ತಿಗೆ ಮೈಕ್ರೋಪೈನಾನ್ಸ್‌ನ ಸಾಲಗಳು ಬರುವುದಿಲ್ಲ ಎಂದು ಅಸೋಸಿಯೇಷನ್ ಆಫ್ ಕರ್ನಾಟಕ ಮೈಕ್ರೋಪೈನಾನ್ಸ್ ಇನ್‌ಸ್ಟಿಟ್ಯೂಶನ್ಸ್ (ಎಕೆಮಿ), ಮೈಕ್ರೋ ಫೈನಾನ್ಸ್ ಇನ್‌ಸ್ಟಿಟ್ಯೂಶನ್ಸ್ ನೆಟ್‌ವರ್ಕ್ (ಎಂಫಿನ್) ಹಾಗೂ ಮೈಕ್ರೋಫೈನಾನ್ಸ್ ಸಂಘಟನೆಗಳ ಉದ್ಯಮವಾಗಿರುವ ಸಾ-ಧನ್ ಸ್ಪಷ್ಟಪಡಿಸಿವೆ.
ಉಡುಪಿಯಲ್ಲಿ ಇಂದು ಮೂರು ಸಂಸ್ಥೆಗಳ ಒಟ್ಟಾಗಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅಕಾಮಿಯ ಸಿಇಓ ವಿ.ಎನ್.ಹೆಗ್ಡೆ ಈ ವಿಷಯ ತಿಳಿಸಿದರು. ಮೈಕ್ರೋಫೈನಾನ್ಸ್ ಉದ್ಯಮವು ಆರ್‌ಬಿಐನ ಕಾನೂನುಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತಿದ್ದು, ಕಳೆದ ಕೆಲವು ದಿನಗಳಿಂದ ಈ ವಿಚಾರದಲ್ಲಿ ಕೆಲವು ವ್ಯಕ್ತಿಗಳು ಹಾಗೂ ಸಂಘಟನೆಗಳು ದುರುದ್ದೇಶಪೂರ್ವಕವಾಗಿ ಗೊಂದಲ ಗಳನ್ನು ಸೃಷ್ಟಿಸುತಿದ್ದಾರೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆಯಲ್ಲಿ ಪಡೆದ ಸಾಲಗಳನ್ನು ಮನ್ನಾ ಮಾಡಲು ಬರುವುದಿಲ್ಲ. ಆದುದರಿಂದ ಸಾಲ ಪಡೆದವರು ಈ ಹಿಂದಿನಂತೆ ಸಾಲ ಮರುಪಾವತಿಸುವ ಅಗತ್ಯವಿದೆ ಎಂದು ಅವರು ಸ್ಪಷ್ಟಪಡಿಸಿದರು.
ದೇಶದಲ್ಲಿ ಆರು ಕೋಟಿ ಮೈಕ್ರೋಫೈನಾನ್ಸ್‌ನ ಗ್ರಾಹಕರಿದ್ದು, ಕರ್ನಾಟಕದಲ್ಲಿ ಈ ಸಂಖ್ಯೆ 30 ಲಕ್ಷದಷ್ಟಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 15 ಮೈಕ್ರೋಫೈನಾನ್ಸ್ ಸಂಸ್ಥೆಗಳು ಕಾರ್ಯಾಚರಿಸುತಿದ್ದು, ಒಟ್ಟು 2 ಲಕ್ಷ ಗ್ರಾಹಕರು ಸುಮಾರು 900 ಕೋಟಿ ರೂ.ಸಾಲವನ್ನು ಹೊಂದಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 80,000 ಮಂದಿ 400 ಕೋಟಿ ರೂ.ಸಾಲವನ್ನು ಈ ಸಂಸ್ಥೆಗಳಿಂದ ಪಡೆದಿದ್ದಾರೆ ಎಂದು ಎಂಫಿನ್‌ನ ಸಿಇಓ ಹರ್ಷ್ ಶ್ರೀವಾಸ್ತವ ತಿಳಿಸಿದರು.
ತಮ್ಮ ಸಂಸ್ಥೆ ಆರ್‌ಬಿಐ ಮಾರ್ಗದರ್ಶಿ ಸೂತ್ರದಂತೆ 25,000ರೂ.ನಿಂದ ಗರಿಷ್ಠ 1.25 ಲಕ್ಷ ರೂ.ಸಾಲವನ್ನು ನಿಗದಿತ ಬಡ್ಡಿಗೆ ನೀಡುತ್ತೇವೆ. ಈ ಬಡ್ಡಿ ದರ ಶೇ.20ರಿಂದ 22 ಆಗಿರುತ್ತದೆ. ಕಳೆದ ಅಕ್ಟೋಬರ್ ತಿಂಗಳ ಪ್ರಾರಂಭ ದವರೆಗೆ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸಾಲ ಮರುಪಾವತಿ ಶೇ.100ರಷ್ಟಿತ್ತು. ಆದರೆ ಋಣಮುಕ್ತ ಕಾಯ್ದೆ ಬಂದ ನಂತರ ಕೆಲವರು ಮೈಕ್ರೋ ಫೈನಾನ್ಸ್‌ನ ಸಾಲಗಳೂ ಈ ಕಾಯ್ದೆ ಬರಲಿದ್ದು, ನಿಮ್ಮ ಸಾಲ ಮನ್ನಾ ಆಗುತ್ತದೆ ಎಂದು ಗ್ರಾಹಕರನ್ನು ನಂಬಿಸಿದ್ದರಿಂದ ಕಳೆದ ಮೂರು ತಿಂಗಳಿನಿಂದ ಸಾಲ ಮರುಪಾವತಿ ಶೇ.50ಕ್ಕಿಳಿದಿದೆ ಎಂದು ವಿ.ಎನ್.ಹೆಗ್ಡೆ ದೂರಿದರು.
ಮೈಕ್ರೋಫೈನಾನ್ಸ್ ಉದ್ಯಮ ಆರ್ಥಿಕ ಸೇರ್ಪಡೆಯ ಒಂದು ಪ್ರಮುಖ ಅಂಗವಾಗಿ ಕೇಂದ್ರ ಸರಕಾರ ಪರಿಗಣಿಸಿದೆ. ಗ್ರಾಮೀಣ ಮಹಿಳೆಯರ ಸಬಲೀಕರಣದ ಭಾಗವಾಗಿ ಇದು ನಡೆಯುತ್ತಿದೆ. ಕಡಿಮೆ ಆದಾಯದ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ, ಸ್ವಸಹಾಯ ಗುಂಪುಗಳಿಗೆ ನಾವು ಯಾವುದೇ ಗ್ಯಾರಂಟಿಯಿಲ್ಲದೇ ಕಿರುಸಾಲ ನೀಡುತ್ತೇವೆ ಎಂದರು.
ಮೈಕ್ರೋಫೈನಾನ್ಸ್ ನೀಡುವ ಸಾಲ ಋಣಮುಕ್ತ ಕಾಯ್ದೆಯಡಿ ಬರುವುದಿಲ್ಲ ಎಂದು ಈಗಾಗಲೇ ಜಿಲ್ಲಾಧಿಕಾರಿಗಳು, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಯಾವುದೇ ಸಂಸ್ಥೆಗಳು, ಆರ್‌ಬಿಐ ನಿಗದಿ ಪಡಿಸಿದ ದರಕ್ಕಿಂತ ಹೆಚ್ಚಿನ ಬಡ್ಡಿ ಪಡೆಯುತ್ತಿಲ್ಲ. ಹಾಗೂ ಸಾಲ ಮರುಪಾವತಿಗಾಗಿ ಗ್ರಾಹಕರು ಅದರಲ್ಲೂ ವಿಶೇಷವಾಗಿ ಮಹಿಳೆಯರ ಮೇಲೆ ಯಾವುದೇ ಬೆದರಿಕೆ, ಹಿಂಸೆ ನೀಡುತ್ತಿಲ್ಲ. ತಮ್ಮ ಮೈಕ್ರೋಫೈನಾನ್ಸ್‌ಗಳಲ್ಲಿ ಸಾಲ ಪಡೆದ 20ಕ್ಕೂ ಅಧಿಕ ಮಹಿಳೆಯರು ಮೃತಪಟ್ಟಿದ್ದಾರೆ ಎಂಬ ಆರೋಪ ಸುಳ್ಳು ಎಂದು ಎಕೆಮಿಯ ಕಾರ್ಯದರ್ಶಿ ಶಾಂತಕುಮಾರ್ ತಿಳಿಸಿದರು.
ಆರ್‌ಬಿಐ ಸೂಚಿಸಿರುವಂತೆ ಮೈಕ್ರೋಫೈನಾನ್ಸ್‌ನಲ್ಲಿ ಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆಂದೇ ಪ್ರತ್ಯೇಕವಾದ ಘಟಕವನ್ನು ಸ್ಥಾಪಿಸಲಾಗಿದೆ. ಯಾವುದೇ ಸಮಸ್ಯೆ ಇದ್ದರೂ ಸಾಲ ಪಡೆದವರು ಈ ಘಟಕಕ್ಕೆ ಮಾಹಿತಿ ನೀಡಬಹುದು. ಕೊನೆಗೂ ಇಲ್ಲಿ ನ್ಯಾಯ ಸಿಗದಿದ್ದರೆ ಗ್ರಾಹಕರು ಆರ್‌ಬಿಐನ ಒಬುಡ್ಸ್‌ಮನ್‌ಗೂ ದೂರು ಸಲ್ಲಿಸಬಹುದು ಎಂದು ಅವರು ಹೇಳಿದರು.







