ಕುಂದಾಪುರ: ಕಲಾಕ್ಷೇತ್ರದಿಂದ 12ಕ್ಕೆ ‘ಇನಿದನಿ’
ಉಡುಪಿ, ಜ.9: ಕುಂದಾಪುರದ ಸಾಂಸ್ಕೃತಿಕ ಸಂಘಟನೆ ಕಲಾಕ್ಷೇತ್ರದ ವತಿಯಿಂದ ದಶಮಾನೋತ್ಸವ ಸಂಭ್ರಮದಂಗವಾಗಿ ಶಿವಮೊಗ್ಗದ ಉಸ್ತಾದ್ ಹುಮಾಯುನ್ ಹರ್ಲಾಪುರ್ ಮತ್ತು ಬಳಗದಿಂದ ಭಜನ್ ಸಂಧ್ಯಾ ಕಾರ್ಯಕ್ರಮ ಜ.11ರ ಸಂಜೆ 6 ಗಂಟೆಗೆ ಕುಂದಾಪುರದ ಬೋರ್ಡ್ ಹೈಸ್ಕೂಲ್‌ನ ಬಯಲು ರಂಗಮಂಟಪದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಕಿಶೋರ್‌ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯೊಂದಿಗಿದ್ದು, ನಮ್ಮನ್ನಗಲಿರುವ ಪ್ರಕಾಶ್ ಯಡಿಯಾಳ್ ಹಾಗೂ ಅವಿನಾಶ್ ಹೆಬ್ಬಾರ್ ಇವರ ಸಂಸ್ಮರಣೆಯಲ್ಲಿ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ ಎಂದರು.
ಅಲ್ಲದೇ ಕಲಾಕ್ಷೇತ್ರದ ಜನಪ್ರಿಯ ಹಳೆಯ ಕನ್ನಡ ಚಲನಚಿತ್ರ ಗೀತೆಗಳ ಮಧುರ ಕಾರ್ಯಕ್ರಮವಾದ ‘ಇನಿದನಿ’ ಜ.12ರ ರವಿವಾರ ಸಂಜೆ 6ಕ್ಕೆ ಅಲ್ಲೇ ನಡೆಯಲಿದೆ. ಇದರಲ್ಲಿ ಖ್ಯಾತ ಗಾಯಕ-ಗಾಯಕಿಯರಾದ ಬೆಂಗಳೂರಿನ ಅಜಯ್ ವಾರಿಯರ್, ರಮೇಶ್ಚಂದ್ರ, ಶೃತಿ ಬಿಡೆ, ಸುರೇಶ್‌ಕೃಷ್ಣ ಅವಧಾನಿ, ದಿವ್ಯಾ ರಾಮಚಂದ್ರ, ಕುಂದಾಪುರದ ಅಶೋಕ್ ಸಾರಂಗ್, ಮಂಗಳೂರಿನ ಪಲ್ಲವಿ ಪ್ರಭು ಹಳೆಯ ಗೀತೆಗಳನ್ನು ಹಾಡಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಉದ್ಯಮಿ ಕೆ.ಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಗು ವುದು ಎಂದು ಕಿಶೋರ್‌ಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಜೇಶ್ ಕಾವೇರಿ ಹಾಗೂ ಶ್ರೀಧರ ಸುವರ್ಣ ಉಪಸ್ಥಿತರಿದ್ದರು.







