ರವಿರಾಜ್ ಪತ್ರಿಕಾ ಧರ್ಮಕ್ಕೆ ನ್ಯಾಯ ಕೊಟ್ಟ ಪತ್ರಕರ್ತ: ರಘುಪತಿ ಭಟ್

ಉಡುಪಿ, ಜ.9: ಅಧ್ಯಯನ ಹಾಗೂ ವಿಮರ್ಶೆ ಮಾಡಿ ಪ್ರಶ್ನೆಗಳನ್ನು ಕೇಳುವ ವಿಶಿಷ್ಟ ಗುಣ ಹೊಂದಿದ್ದ ಹಿರಿಯ ಪತ್ರಕರ್ತ ರವಿರಾಜ ವಳಲಂಬೆ, ತನ್ನ ನಿಲುವು ಏನೇ ಇದ್ದರೂ ವೃತ್ತಿಯಲ್ಲಿ ಪತ್ರಿಕಾ ಧರ್ಮಕ್ಕೆ ನ್ಯಾಯ ಕೊಡುವ ಕೆಲಸ ವನ್ನು ಮಾಡಿದ್ದರು ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದ್ದಾರೆ.
ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಗುರುವಾರ ಆಯೋಜಿಸಲಾದ ಹಿರಿಯ ಪತ್ರಕರ್ತ ರವಿರಾಜ ವಳಲಂಬೆ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ವಿಶಿಷ್ಟ ಮತ್ತು ಭಿನ್ನ ವ್ಯಕ್ತಿತ್ವದ ಪತ್ರಕರ್ತರಾಗಿದ್ದ ರವಿರಾಜ್ ವಳಲಂಬೆ, ವೈಯಕ್ತಿಕ ಸಮಸ್ಯೆಗಳಿದ್ದರೂ ಪತ್ರಿಕಾ ಧರ್ಮಕ್ಕೆ ಚ್ಯುತಿ ಬಾರದಂತೆ ಕೆಲಸ ನಿರ್ವಹಿಸುತ್ತಿದ್ದರು. ಇವರ ಕುಟುಂಬಕ್ಕೆ ನೆರವು ನೀಡುವ ನಿಟ್ಟಿನಲ್ಲಿ ನಾವೆಲ್ಲ ಸೇರಿ ನಿಧಿ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು.
ಚಿಂತಕ ರಾಜಾರಾಮ್ ತಲ್ಲೂರು ಮಾತನಾಡಿ, ಪ್ರಯೋಗಶೀಲ ಪತ್ರಕರ್ತ ರಾಗಿದ್ದ ವಳಲಂಬೆ, ಟಿವಿ ಮಾಧ್ಯಮದಲ್ಲಿ ಸಾಕಷ್ಟು ಸಾಧನೆ ಮಾಡುವ ಕನಸನ್ನು ಕಂಡಿದ್ದರು. ಅವರಿಗೆ ಮಾಧ್ಯಮ ಕ್ಷೇತ್ರದ ತುಡಿತ ಇತ್ತು. ಮಾಧ್ಯಮದ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಿದ್ದರು. ಅವರ ಬದುಕು ಇಂದಿನ ಮಾಧ್ಯಮದವರಿಗೆ ಸ್ಪೂರ್ತಿ ಆಗಬೇಕು ಎಂದರು.
ಮಾಜಿ ಶಾಸಕ ಯು.ಆರ್.ಸಭಾಪತಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ದಾಮೋದರ್ ಐತಾಳ್, ರವಿರಾಜ್ ಸಹೋದರ ಸುಬ್ರಹ್ಮಣ್ಯ ಗೌಡ, ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್, ಪತ್ರಕರ್ತ ಶಶಿಧರ ಮಾಸ್ತಿಬೈಲು, ಮನೋ ತಜ್ಞ ಡಾ.ಪಿ.ವಿ.ಭಂಡಾರಿ, ಉಪ ನ್ಯಾಸಕ ಪ್ರೊ.ಸುರೇಂದ್ರನಾಥ್ ಶೆಟ್ಟಿ, ಡಾ.ಸುಮಾ ಮೊದಲಾದವರು ನುಡಿ ನಮನ ಸಲ್ಲಿಸಿದರು. ದಿನೇಶ್ ಕಿಣಿ ಕಾರ್ಯಕ್ರಮ ನಿರೂಪಿಸಿದರು.








