ರಾಜ್ಯದಲ್ಲಿ ಅಂಗನವಾಡಿಗಳಿಗೆ ಹೈಟೆಕ್ ಸ್ಪರ್ಶ: ಸಚಿವೆ ಶಶಿಕಲಾ ಜೊಲ್ಲೆ

ಉಡುಪಿ, ಜ.9: ರಾಜ್ಯದಲ್ಲಿ ಅಂಗನವಾಡಿಗಳಿಗೆ ಹೈಟೆಕ್ ಸ್ಪರ್ಶ ನೀಡಿ, ಮಕ್ಕಳಿಗೆ ಡಿಜಿಟಲ್ ಪುಸ್ತಕಗಳನ್ನು ಒದಗಿಸಿ ಅವರಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಮಣಿಪಾಲದ ಜಿಲ್ಲಾ ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಈ ಕುರಿತು ಇಲಾಖೆಯ ವತಿಯಿಂದಲೇ ಅಂಗನವಾಡಿ ಶಿಕ್ಷಕಿಯರಿಗೆ ತರಬೇತಿ ನೀಡ ಲಾಗುವುದು. ಅಂಗನವಾಡಿಗಳಲ್ಲಿ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಅಂಗನವಾಡಿಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಹಾಗೂ ಪೇಸ್ ರೀಡಿಂಗ್ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಪಾರದರ್ಶಕತೆ ತರಲಾಗುವುದು. ಹೊಸ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಮತ್ತು ಶಿಥಿಲವಾಗಿರುವ ಕಟ್ಟಡಗಳ ದುರಸ್ತಿ ಕಾರ್ಯ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಅವೈಜ್ಞಾನಿಕವಾಗಿರುವ ಮಾತೃ ಪೂರ್ಣ ಯೋಜನೆಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ ಸಾಕಷ್ಟು ಲೋಪಗಳಿರುವುದರಿಂದ ಅಗತ್ಯ ಕಂಡುಬಂದಲ್ಲಿ ಯೋಜನೆಯ ಸ್ವರೂಪವನ್ನು ಬದಲಾಯಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸಿಇಓ ಪ್ರೀತಿ ಗೆಹ್ಲೋಟ್ ಉಪಸ್ಥಿತರಿದ್ದರು.







