ಸಿಎಎ-ಎನ್‌ಆರ್‌ಸಿ ವಿರೋಧಿಸಿ ವಕೀಲರಿಂದ ಹೈಕೋರ್ಟ್ ಮುಂಭಾಗ ಮಾನವ ಸರಪಳಿ

ಬೆಂಗಳೂರು, ಜ.9: ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿಸಿ ಬೆಂಗಳೂರು ನಗರದ ವಕೀಲರು ಹೈಕೋರ್ಟ್ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಗುರುವಾರ ಹೈಕೋರ್ಟ್ ಮುಂಭಾಗ ಹೈಕೋರ್ಟ್, ಸಿಟಿ ಸಿವಿಲ್ ಕೋರ್ಟ್ ವಕೀಲರು ಮಾನವ ಸರಪಳಿ ನಿರ್ಮಿಸಿ ಒಕ್ಕೊರಲಿನಿಂದ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಪ್ರಕ್ರಿಯೆಯನ್ನು ವಿರೋಧಿಸಿದರು. ಇಂತಹ ಸಂವಿಧಾನ ವಿರೋಧಿ ಕಾಯಿದೆಗಳಿಂದ ಜನರು ತೊಂದರೆಗೆ ಸಿಲುಕುತ್ತಾರೆ. ಹೀಗಾಗಿ, ಈ ಕೂಡಲೇ ಸಂವಿಧಾನ ವಿರೋಧಿ ಕಾಯಿದೆಯಾಗಿರುವ ಸಿಎಎ ಜಾರಿಯಿಂದ ಹಿಂದೆ ಸರಿಯಬೇಕೆಂದು ಒತ್ತಾಯಿಸಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಹೈಕೋರ್ಟ್ ಹಿರಿಯ ವಕೀಲ ಸಿ.ಎಸ್.ದ್ವಾರಕಾನಾಥ್ ಅವರು ಮಾತನಾಡಿ, ಎನ್‌ಡಿಎ ನೇತೃತ್ವದ ಕೇಂದ್ರ ಸರಕಾರ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಜಾರಿಗೆ ತರುವ ಮೂಲಕ ದೇಶ ಹಾಗೂ ಧರ್ಮವನ್ನು ಇಬ್ಭಾಗ ಮಾಡಲು ಹೊರಟಿದ್ದು, ಇಂತಹ ಸಂವಿಧಾನ ವಿರೋಧಿ ಕಾಯಿದೆಗಳನ್ನು ಶೀಘ್ರದಲ್ಲಿಯೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಆರೆಸ್ಸೆಸ್‌ನ ನಾಗಪುರ ಅಜೆಂಡಾವೇ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಕಟ್ಟಿದ ದೇಶವನ್ನು ಒಡೆಯುವುದಾಗಿದೆ. ಅಸ್ಸಾಂ ಜನರಿಗೆ ನೀವು ಭಾರತಿಯರು ಎಂಬುದಕ್ಕೆ ಏನು ಸಾಕ್ಷಿಯಿದೆ ಎಂದು ಕೇಳುತ್ತಿದ್ದಾರೆ. ಅಲ್ಲದೆ, ರೇಷನ್ ಕಾರ್ಡ್ ಸೇರಿ ಎಲ್ಲ ಸಾಕ್ಷಿಗಳನ್ನು ಒದಗಿಸಿದರೂ ನೀವು ಬೇರೆ ದೇಶದಿಂದ ಬಂದಿದ್ದೀರಿ ಎಂದು ಮುಸ್ಲಿಮರನ್ನೆ ಟಾರ್ಗೆಟ್ ಮಾಡುತ್ತಿದ್ದಾರೆ. ಇಂತಹ ಪ್ರಜಾಪ್ರಭುತ್ವ ವಿರೋಧಿ ನೀತಿಗಳನ್ನು ಕೈಬಿಟ್ಟು, ನಿರುದ್ಯೋಗ ಹೋಗಲಾಡಿಸಲು, ಅಪೌಷ್ಠಿಕತೆ, ಆರೋಗ್ಯ ಸೌಲಭ್ಯ ಇತರೆ ಸಮಾಜದ ಸುಧಾರಣೆ ಕಡೆಗೆ ಗಮನ ಕೊಡಬೇಕೆಂದು ಆಗ್ರಹಿಸಿದರು.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ಹಲವು ದಶಕಗಳಿಂದ ಹಿಂದು, ಮುಸ್ಲಿಮರು ಯಾವುದೇ ಭೇದ ಭಾವ ಇಲ್ಲದೆ ಸಹೋದರರಂತೆ ಬಾಳುತ್ತಿದ್ದೇವೆ. ಪೌರತ್ವ ತಿದ್ದುಪಡಿ ಕಾಯಿದೆಯನ್ನು ಜಾರಿಗೆ ತರುವ ಮೂಲಕ ನಮ್ಮಲ್ಲಿ ಒಡಕು ಮೂಡಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಕೇಂದ್ರ ಸರಕಾರ ಸಿಸಿಎ ಅನ್ನು ತಕ್ಷಣವೇ ವಾಪಸ್ ಪಡೆಯಬೇಕು. ಅಲ್ಲದೆ, ಮಂಗಳೂರಿನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಮುಸ್ಲಿಮರ ಮೇಲೆ ದಾಳಿ ನಡೆಸಿ ಇಬ್ಬರನ್ನು ಗುಂಡಿನಿಂದ ಕೊಲೆ ಮಾಡಿದ ಹಿನ್ನೆಲೆಯಲ್ಲಿ ಅಲ್ಲಿಯ ಪೊಲೀಸ್ ಆಯುಕ್ತರನ್ನು ಆ ಸ್ಥಳದಿಂದ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನಗರದ ಹಲವು ವಕೀಲರು ಭಾಗಿಯಾಗಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಅನ್ನು ಬೆಂಬಲಿಸಿ ಬೆಂಗಳೂರು ರಾಜ್ಯ ವಕೀಲರ ಪರಿಷತ್ ಗುರುವಾರ ಹೈಕೋರ್ಟ್ ಮುಂಭಾಗ ಧರಣಿ ನಡೆಸಿದರು. ಹಿರಿಯ ವಕೀಲ ವಿವೇಕರೆಡ್ಡಿ ಸೇರಿ ಮತ್ತಿತರ ವಕೀಲರು ಧರಣಿಯಲ್ಲಿ ಪಾಲ್ಗೊಂಡಿದ್ದರು.







