ದ.ಕ. ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ
ಮಂಗಳೂರು, ಜ.9: ದ.ಕ. ಜಿಲ್ಲಾಡಳಿತ, ಜಿಪಂ, ಮಂಗಳೂರು ಮನಪಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ ವತಿಯಿಂದ ನಗರದ ಲಾಲ್‌ಬಾಗ್ ಸಮೀಪದ ಮಂಗಳಾ ಕ್ರೀಡಾಂಗಣದಲ್ಲಿ ಎರಡು ದಿನ ಕಾಲ ನಡೆಯುವ ದ.ಕ. ಜಿಲ್ಲಾ ಮಟ್ಟದ ಸರಕಾರಿ ನೌಕರರ ಕ್ರೀಡಾಕೂಟಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಸಿಇಒ ಡಾ. ಆರ್. ಸೆಲ್ವಮಣಿ ಕ್ರೀಡೆ ಮತ್ತು ಯೋಗದಲ್ಲಿ ತೊಡಗಿಸಿಕೊಂಡವರು ಆರೋಗ್ಯಯುತ ಜೀವನ ಶೈಲಿ ನಡೆಸುತ್ತಾರೆ. ಇದರಲ್ಲಿ ಸರ್ವ ರೋಗಗಳಿಗೂ ಪರಿಹಾರವಿದೆ ಎಂದರು.
ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ ದೈಹಿಕ ಮತ್ತು ಮಾನಸಿಕ ಆರೋಗ್ಯ, ಸದೃಢತೆಗಾಗಿ ಕ್ರೀಡೆ ಅವಶ್ಯಕವಾಗಿದೆ. ಸೋಲು ಗೆಲುವಿಗಿಂತ ಕ್ರೀಡಾಭಿಮಾನ ಮುಖ್ಯವಾಗಿದೆ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರಮಟ್ಟದಲ್ಲಿ ಪದಕ ಗಳಿಸಿದ ಹಲವು ಸರಕಾರಿ ನೌಕರರು ಜಿಲ್ಲೆಯಲ್ಲಿದ್ದಾರೆ. ನಿರಂತರ ಕೆಲಸ ಕಾರ್ಯಗಳ ನಡುವೆಯೂ ಬಿಡುವು ಮಾಡಿಕೊಂಡು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡು ಪದಕ ಗೆದ್ದು ಬರುತ್ತಿರುವುದು ಹೆಮ್ಮೆಯ ವಿಚಾರ. ಈ ಕ್ರೀಡಾಸ್ಫೂರ್ತಿ ಹೀಗೆ ಮುಂದುವರಿ ಯಲಿ ಎಂದರು.
ಕಾರ್ಪೊರೇಟರ್ ಸಂಧ್ಯಾ ಎಂ. ಆಚಾರ್, ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸಿ ಅತಿಥಿಗಳಾಗಿದ್ದರು. ಸಂಘದ ಜಿಲ್ಲಾಧ್ಯಕ್ಷ ಪಿ.ಕೆ. ಕೃಷ್ಣ, ಸೌತ್ ಕೆನರಾ ಸರಕಾರಿ ನೌಕರರ ಬ್ಯಾಂಕ್‌ನ ಪ್ರಕಾಶ್ ನಾಯಕ್, ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಶೆರ್ಲಿ, ಕಾರ್ಯದರ್ಶಿ ನವೀನ್ ಕುಮಾರ್, ಬಂಟ್ವಾಳ ತಾಲೂಕು ಅಧ್ಯಕ್ಷ ಉಮಾನಾಥ ರೈ, ಸುಳ್ಯ ತಾಲೂಕು ಅಧ್ಯಕ್ಷ ತೀರ್ಥರಾಮ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರ, ಅಂತಾರಾಷ್ಟ್ರ ಮಟ್ಟದ ಕ್ರೀಡಾ ಸಾಧಕರಾದ ದೀಪಿಕಾ, ಹೇಮಚಂದ್ರ, ಸುನಂದಾ, ಉಷಾರಾಣಿ ಕ್ರೀಡಾಜ್ಯೋತಿ ಬೆಳಗಿದರು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರ ಮಟ್ಟದ ಕ್ರೀಡಾ ಸಾಧಕರಾದ ಹೇಮಚಂದ್ರ, ಭಾಗೀರಥಿ ರೈ, ವಿನ್ಸೆಂಟ್ ಪ್ರಕಾಶ್, ನಾಗರಾಜ ಖಾರ್ವಿ, ಕಾಶೀಮಠ್ ಈಶ್ವರ್ ಭಟ್ ಅವರನ್ನು ಸನ್ಮಾನಿಸಲಾಯಿತು. ವಾಣಿ ಮತ್ತು ಇಂದಿರಾವತಿ ಸನ್ಮಾನಿತರನ್ನು ಪರಿಚಯಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜ ಸ್ವಾಗತಿಸಿದರು. ಕ್ರೀಡಾಧಿಕಾರಿ ವಿನೋದ್‌ಕುಮಾರ್ ಸೂರಿಂಜೆ ವಂದಿಸಿದರು. ಕ್ರೀಡಾ ಕಾರ್ಯದರ್ಶಿ ಸುಧೀರ್ ಪ್ರತಿಜ್ಞಾವಿಧಿ ಬೋಧಿಸಿದರು.







