ಹೈಕೋರ್ಟ್‌ನಲ್ಲಿ ಕಾರ್ಯಕಲಾಪಗಳ ನೇರ ಪ್ರಸಾರ ವಿಚಾರ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಜ.9: ಸುಪ್ರೀಂ ಕೋರ್ಟ್‌ನ ಆದೇಶದಂತೆ ಹೈಕೋರ್ಟ್‌ನ ಕಾರ್ಯಕಲಾಪಗಳ ನೇರ ಪ್ರಸಾರ ಮಾಡಬೇಕು ಹಾಗೂ ಆಡಿಯೋ ರೆಕಾರ್ಡಿಂಗ್‌ಗೆ ನಿರ್ದೇಶಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ವಕೀಲ ದಿಲ್‌ರಾಜ್ ರೋಹಿತ್ ಸಿಕ್ವೇರಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿತು.
ಅರ್ಜಿದಾರ ದಿಲ್‌ರಾಜ್ ರೋಹಿತ್ ಸಿಕ್ವೇರಾ ವಾದಿಸಿ, ಹೈಕೋರ್ಟ್‌ನ ಕಾರ್ಯಕಲಾಪಗಳಲ್ಲಿ ನೇರ ಪ್ರಸಾರ ಮಾಡಬೇಕು ಹಾಗೂ ಆಡಿಯೋ ರೆಕಾರ್ಡಿಂಗ್ ಮಾಡಬೇಕೆಂದು ಸುಪ್ರೀಂಕೋರ್ಟ್ ಈಗಾಗಲೇ ಆದೇಶ ನೀಡಿದ್ದು, ಈ ಆದೇಶವನ್ನು ಜಾರಿಗೆ ತರಲು ನಿರ್ದೇಶನ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಸುಪ್ರೀಂಕೋರ್ಟ್ ಆದೇಶವಿದ್ದರೂ ಇವುಗಳನ್ನು ಗೈಡ್‌ಲೈನ್ಸ್ ಅನುಸಾರವಾಗಿಯೇ ಜಾರಿಗೆ ತರಬೇಕಾಗುತ್ತದೆ. ಹೈಕೋರ್ಟ್‌ನ ಕಾರ್ಯಕಲಾಪಗಳಲ್ಲಿ ಕ್ಯಾಮರಾಗಳನ್ನು ಯಾವ ಸ್ಥಳದಲ್ಲಿ ಅಳವಡಿಸಬೇಕು. ಎಷ್ಟು ಅಳವಡಿಸಬೇಕು ಎಂಬುದರ ಬಗ್ಗೆಯೂ ತಿಳಿಯಬೇಕಾಗುತ್ತದೆ. ಇದರ ಸಾಧಕ ಬಾಧಕಗಳನ್ನೂ ನೀಡಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.







