ಪೇಜಾವರ ಶ್ರೀ ಮಾದರಿಯನ್ನು ಆಡಳಿತದಲ್ಲಿ ಅನುಷ್ಠಾನಕ್ಕೆ ಆಗ್ರಹ : ನಾಗೇಶ್ ಅಂಗೀರಸ

ಮಂಗಳೂರು, ಜ.9: ವಿಶ್ವೇಶ ತೀರ್ಥ ಸ್ವಾಮೀಜಿ ಮಾಡಿರುವ ಸಾಮಾಜಿಕ ಕೆಲಸ ಕಾರ್ಯಗಳ ಮೇಲ್ಪಂಕ್ತಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾದರಿಯಾಗಿ ಆಡಳಿತದಲ್ಲಿ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಪೇಜಾವರ ಶ್ರೀಗಳ ಅನುಯಾಯಿ, ಚಿಕ್ಕಮಗಳೂರಿನ ಪ್ರಜಾಪ್ರಭುತ್ವ ಉಳಿಸಿ ವೇದಿಕೆ ಕಾರ್ಯಕರ್ತ ನಾಗೇಶ್ ಅಂಗೀರಸ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ಆಗ್ರಹ ಮಾಡಿದ ಅವರು, ದೇಶದ ಏಕತೆ ಮತ್ತು ಸಂಸ್ಕೃತಿಯ ಅಖಂಡತೆಗೆ ಪೇಜಾವರ ಶ್ರೀ ಶ್ರಮಿಸಿದ್ದಾರೆ ಎಂದರು.
ಮಹಾರಾಷ್ಟ್ರದ ಲಾತೂರ್ ಭೂಕಂಪ ಸಂತ್ರಸ್ತರಿಗೆ ಮಠದಿಂದ ಮನೆ ನಿರ್ಮಾಣ ಸೇರಿದಂತೆ ಇತರ ಕಡೆಗಳಲ್ಲೂ ಸಂತ್ರಸತಿರ ನೆರವಿಗೆ ಧಾವಿಸಿದ್ದಾರೆ. ಗಣಿಗಾರಿಕೆ ಹಾಗೂ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ನೆರವಾದ ಪೇಜಾವರ ಶ್ರೀಗಳು, ಸಮಾಜದಲ್ಲಿ ಅಸ್ಪಶ್ಯತೆ ನಿವಾರಣೆಗೆ ಬಹಳವಾಗಿ ಪ್ರಯತ್ನಿಸಿದ್ದಾರೆ. ಪೇಜಾವರ ಶ್ರೀಗಳ ಸಮಾಜಮುಖಿ ಕಾರ್ಯಗಳು ನಕ್ಸಲ್ ಚಟುವಟಿಕೆ ನಿಯಂತ್ರಣಕ್ಕೆ ಕಾರಣವಾಗಿದೆ. ಇದರಿಂದ ಪ್ರೇರೇಪಣೆಗೊಂಡು ಸರ್ಕಾರಗಳು ಜಾರ್ಖಂಡ್‌ನಲ್ಲಿ ಬಿಜೆಪಿ ಸೋಲಿಗೆ ಅಲ್ಲಿನ ಸರ್ಕಾರ ಸ್ಥಳೀಯ ಬುಡಕಟ್ಟು ಜನತೆಯ ಹಿತಾಸಕ್ತಿಗೆ ವಿರುದ್ಧವಾಗಿ ಗಣಿಗಾರಿಕೆಯನ್ನು ಬೆಂಬಲಿಸಿದ್ದೇ ಕಾರಣ. ಬುಡಕಟ್ಟು ಜನತೆಯ ಸಂರಕ್ಷಣೆ ಹಾಗೂ ಆ ಸಮುದಾಯದ ಉನ್ನತಿಗೆ ಶ್ರಮಿಸುವುದೇ ಪೇಜಾವರ ಶ್ರೀಗೆ ಸಲ್ಲಿಸುವ ಗೌರವವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಗಮನ ಹರಿಸಬೇಕು ಎಂದು ಅವರು ಹೇಳಿದರು.
ಜಾರ್ಖಂಡ್‌ನಲ್ಲಿ ಯುಪಿಎ ಸರಕಾರ ಇರುವಾಗಲೂ ಗಣಿಗಾರರ ಪರವಾಗಿ ವರ್ತಿಸಿದೆ. ಬಳಿಕ ಬಿಜೆಪಿ ಸರ್ಕಾರ ಬಂದರೂ ಜಾರ್ಖಂಡ್‌ನ ಛೋಟಾನಾಗ್‌ಪುರ್‌ನಲ್ಲಿ ಹಿಡುವಳಿ ಕಾಯ್ದೆ ಮತ್ತು ಸಂತಾಲ್ ಪರಗಣಾಸ್ ಹಿಡುವಳಿ ಕಾಯ್ದೆಯನ್ನು ದುರ್ಬಲ ಗೊಳಿಸಲು ಪ್ರಯತ್ನಿಸಿ ದೊಡ್ಡ ಗಣಿ ಕಂಪನಿಗಳಿಗೆ ಲಾಭ ಮಾಡಿಕೊಡಲು ಮುಂದಾಗಿರುವುದೇ ಬಿಜೆಪಿ ಸೋಲುವಂತಾಯಿತು ಎಂದರು.
ಪೇಜಾವರ ಶ್ರೀಗಳು ರಾಜ್ಯದ ನಾಲ್ಕು ಜಿಲ್ಲೆಗಳ 70 ಗ್ರಾಮ ಪಂಚಾಯಿತಿಗಳಲ್ಲಿ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಸಾಕಷ್ಟು ಬಾರಿ ಓಡಾಟ ನಡೆಸಿ ಪ್ರಯತ್ನ ನಡೆಸಿದ್ದಾರೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ವಿಶೇಷ ಛಾಪು ಮೂಡಿಸಿದ ಪೇಜಾವರರ ಆದರ್ಶ ನಡೆ ಅನುಕರಣೀಯ ಎಂದರು.







