ಲಕ್ಷ್ಮೀ ಅಗರ್ವಾಲ್ ವಕೀಲೆಗೆ ಮನ್ನಣೆ ನೀಡುವಂತೆ ‘ಚಪಾಕ್’ ನಿರ್ಮಾಪಕಿಗೆ ನ್ಯಾಯಾಲಯ ಸೂಚನೆ
ಹೊಸದಿಲ್ಲಿ, ಜ. 9: ‘ಚಪಾಕ್’ ಚಿತ್ರಕ್ಕೆ ಕೊಡುಗೆ ನೀಡಿದ ಲಕ್ಷ್ಮೀ ಅಗರ್ವಾಲ್ ಅವರ ವಕೀಲೆ ಅಪರ್ಣಾ ಭಟ್ ಅವರಿಗೆ ಮನ್ನಣೆ ನೀಡುವಂತೆ ದಿಲ್ಲಿ ನ್ಯಾಯಾಲಯ ಗುರುವಾರ ಚಿತ್ರ ನಿರ್ಮಾಪಕಿ ಮೇಘನಾ ಗುಲ್ಜರ್ ಅವರಿಗೆ ಗುರುವಾರ ನಿರ್ದೇಶಿಸಿದೆ.
‘ಚಪಾಕ್’ ಚಿತ್ರದಲ್ಲಿ ತನ್ನ ಕೊಡುಗೆ ಪರಿಗಣಿಸದೇ ಇರುವುದರಿಂದ ಅಸಮಾನಧಾನಗೊಂಡಿದ್ದ ಲಕ್ಷ್ಮೀ ಅಗರ್ವಾಲ್ ಅವರ ವಕೀಲೆ ಅಪರ್ಣಾ ಭಟ್ ‘ಚಪಾಕ್’ ನಿರ್ಮಾಪಕಿಯ ವಿರುದ್ಧ ದಿಲ್ಲಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಅಪರ್ಣಾ ಭಟ್ ಸಲ್ಲಿಸಿದ ಮನವಿಯನ್ನು ಗುರುವಾರ ವಿಚಾರಣೆ ನಡೆಸಿದ ಪಾಟಿಯಾಲ ನ್ಯಾಯಾಲಯದ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಡಾ. ಪಂಕಜ್ ಶರ್ಮಾ ದೂರುದಾರೆ ಅಪರ್ಣಾ ಭಟ್ ಅವರು ಚಿತ್ರಕ್ಕೆ ನೀಡಿದ ಕೊಡುಗೆಗೆ ಮನ್ನಣೆ ನೀಡುವಂತೆ ಮೇಘನಾ ಗುಲ್ಜಾರ್‌ಗೆ ಆದೇಶಿಸಿದ್ದಾರೆ.
ದೀಪಿಕಾ ಪಡುಕೋಣೆ ನಟನೆಯ ‘ಚಪಾಕ್’ ಚಿತ್ರದಲ್ಲಿ ‘‘ಮಹಿಳೆಯರ ವಿರುದ್ಧ ಲೈಂಗಿಕ ಹಾಗೂ ದೈಹಿಕ ಹಿಂಸಾಚಾರದ ಪ್ರಕರಣಗಳಲ್ಲಿ ಅಪರ್ಣಾ ಭಟ್ ನಿರಂತರ ಹೋರಾಡಿದರು’’ ಎಂಬ ಸಾಲನ್ನು ಸೇರಿಸುವಂತೆ ಕೂಡ ನ್ಯಾಯಾಲಯ ಮೇಘನಾ ಗುಲ್ಜರ್ ಅವರಿಗೆ ಸೂಚಿಸಿದೆ.







