ತಮಿಳುನಾಡು ರಣಜಿ ತಂಡಕ್ಕೆ ಇಂದ್ರಜಿತ್ ಸೇರ್ಪಡೆ

ಚೆನ್ನೈ, ಜ.9: ಮುಂಬೈ ಹಾಗೂ ರೈಲ್ವೇಸ್ ವಿರುದ್ಧ ನಡೆಯಲಿರುವ ಮುಂಬರುವ ರಣಜಿ ಪಂದ್ಯಗಳಿಗೆ ಬಾಬಾ ಇಂದ್ರಜಿತ್ ತಮಿಳುನಾಡು ತಂಡವನ್ನು ಸೇರ್ಪಡೆಯಾಗಿದ್ದಾರೆ.
ಭುಜನೋವಿನಿಂದ ಚೇತರಿಸಿಕೊಳ್ಳುತ್ತಿರುವ ಇಂದ್ರಜಿತ್ ರಣಜಿಯ ಮೊದಲಾರ್ಧದಲ್ಲಿ ಆಡಿಲ್ಲ. ಈ ವಾರಾರಂಭದಲ್ಲಿ ಎಂಎಸ್ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಇಂದ್ರಜಿತ್ ಉತ್ತೀರ್ಣರಾಗಿದ್ದರು. ಪ್ರದೋಶ್‌ರಂಜನ್ ಪಾಲ್‌ರನ್ನು ರಣಜಿ ತಂಡದಿಂದ ಬಿಡುಗಡೆಗೊಳಿಸಲಾಗಿದ್ದು, ಅವರು ತಮಿಳುನಾಡು ಅಂಡರ್-23 ತಂಡದಲ್ಲಿ ಆಡಲಿದ್ದಾರೆ. ತಮಿಳುನಾಡು ತಂಡ ಜ.11ರಂದು ಮುಂಬೈ ತಂಡವನ್ನು ಎದುರಿಸಲಿದೆ. ಜ.19ರಂದು ರೈಲ್ವೇಸ್ ತಂಡವನ್ನು ಮುಖಾಮುಖಿಯಾಗಲಿದೆ. ವಿಜಯ ಹಝಾರೆ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟ್ವೆಂಟಿ-20 ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸುವುದೊಂದಿಗೆ ಈ ಋತುವನ್ನು ಆರಂಭಿಸಿದ್ದ ತಮಿಳುನಾಡು ಈ ತನಕ ರಣಜಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿಲ್ಲ. ಆಡಿದ 4 ಪಂದ್ಯಗಳ ಪೈಕಿ ಕೇವಲ 4 ಅಂಕ ಗಳಿಸಿದೆ. ನಾಕೌಟ್ ಹಂತಕ್ಕೇರುವ ವಿಶ್ವಾಸ ಹೆಚ್ಚಿಸಿಕೊಳ್ಳಲು ಮುಂಬೈ ಹಾಗೂ ರೈಲ್ವೇಸ್ ವಿರುದ್ಧ ಗೆಲ್ಲಬೇಕಾಗಿದೆ.





