ನ್ಯೂಝಿಲ್ಯಾಂಡ್ ವಿರುದ್ಧ ಟ್ವೆಂಟಿ-20 ಸರಣಿಗೆ ಮೊದಲು ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಪರೀಕ್ಷೆ

ಹೊಸದಿಲ್ಲಿ, ಜ.9: ಬೆನ್ನುನೋವಿನಿಂದ ಚೇತರಿಸಿಕೊಂಡಿರುವ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನ್ಯೂಝಿಲ್ಯಾಂಡ್‌ನಲ್ಲಿ ನಡೆಯಲಿರುವ ಟ್ವೆಂಟಿ-20 ಸರಣಿಯಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸಾಗಲು ಸಜ್ಜಾ ಗುತ್ತಿದ್ದಾರೆ. ಇದಕ್ಕೂ ಮೊದಲು ಭಾರತ ‘ಎ ’ ತಂಡದೊಂದಿಗೆ ಎರಡು ಅಭ್ಯಾಸ ಪಂದ್ಯ ಆಡುವ ಮೂಲಕ ಫಿಟ್ನೆಸ್ ಸಾಬೀತುಪಡಿಸಲು ಬಯಸಿದ್ದಾರೆ. ಈ ತಿಂಗಳಾಂತ್ಯದಲ್ಲಿ ಟೀಮ್ ಇಂಡಿಯಾ ಕಿವೀಸ್ ನಾಡಿಗೆ ತೆರಳುವ ಮೊದಲು ಜನವರಿಯ ಮೂರನೇ ವಾರದಲ್ಲಿ ಭಾರತ ‘ಎ’ ಹಾಗೂ ನ್ಯೂಝಿಲ್ಯಾಂಡ್ ‘ಎ’ ತಂಡಗಳ ನಡುವೆ 50 ಓವರ್‌ಗಳ ಎರಡು ಅಭ್ಯಾಸ ಪಂದ್ಯಗಳು ನಡೆಯಲಿವೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪಾಂಡ್ಯ ಅವರು ಪುನಶ್ಚೇತನ ಅವಧಿಯಲ್ಲಿ ಜಸ್‌ಪ್ರೀತ್ ಬುಮ್ರಾರಂತೆಯೇ ವಿವಾದದಲ್ಲಿ ಸಿಲುಕಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಗೆ ತೆರಳದೇ ದೂರ ಉಳಿದಿದ್ದರು. ಎನ್‌ಸಿಎಯಿಂದ ವಿಶೇಷ ಅನುಮತಿ ಪಡೆದು ಮನೆಯಲ್ಲಿ ಪುನಶ್ಚೇತನ ಕಾರ್ಯ ಕೈಗೊಂಡಿದ್ದರು. ಭಾರತ ‘ಎ’ ತಂಡ ಶನಿವಾರ ಬೆಳಗ್ಗೆ ನ್ಯೂಝಿಲ್ಯಾಂಡ್‌ಗೆ ಪ್ರವಾಸ ಕೈಗೊಳ್ಳುವ ಮೊದಲು ಭಾರತ ‘ಎ’ ತಂಡದ ಸಿಬ್ಬಂದಿ, ಪಾಂಡ್ಯ ಅವರ ಫಿಟ್ನೆಸ್‌ನ್ನು ಪರೀಕ್ಷಿಸಲಿದೆ. ಜನವರಿಯ ಮೂರನೇ ವಾರ ಪಾಂಡ್ಯ ಅವರ ಫಿಟ್ನೆಸ್‌ನ ಸ್ಪಷ್ಟ ಚಿತ್ರಣ ಲಭಿಸಲಿದೆ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಡಿ.23ರಂದು ಹೇಳಿಕೆ ನೀಡಿದ್ದರು. ಪಾಂಡ್ಯ ಅವರ ಗಾಯ ಗುಣಮುಖ ವಾಗಿದೆ ಎಂದು ಆಯ್ಕೆಗಾರರು ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. ಭಾರತ ‘ಎ’ ತಂಡ ಎರಡು ಅಭ್ಯಾಸ ಪಂದ್ಯಗಳನ್ನು ಆಡಿದ ಬಳಿಕ ಪಾಂಡ್ಯ ಅವರ ಫಿಟ್ನೆಸ್ ಪರೀಕ್ಷಿಸುವ ಯೋಜನೆಯಿದೆ. ಆ ಬಳಿಕ ಪಾಂಡ್ಯ ನ್ಯೂಝಿಲ್ಯಾಂಡ್ ವಿರುದ್ಧದ 5 ಪಂದ್ಯಗಳ ಟ್ವೆಂಟಿ-20 ಸರಣಿಗೆ ಆಯ್ಕೆಯಾಗಲಿದ್ದಾರೆ ಎಂದು ಬಿಸಿಸಿಐನ ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ಫೆಬ್ರವರಿ ಅಂತ್ಯಕ್ಕೆ ನಡೆಯುವ ಕಿವೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಂಡ್ಯ ಆಡುತ್ತಾರೆಯೇ? ಎಂಬ ಕುತೂಹಲ ಎಲ್ಲರಲ್ಲಿದೆ.ಬುಮ್ರಾ ಅವರ ಫಿಟ್ನೆಸ್ ಟೆಸ್ಟ್ ನಡೆಸದೆ ಎನ್‌ಸಿಎ ವಿವಾದಕ್ಕೆ ಸಿಲುಕಿತ್ತು.







