ಕುಲಪತಿ ರಾಜೀನಾಮೆಯ ಬೇಡಿಕೆ ಕೈಬಿಟ್ಟಿಲ್ಲ: ಜೆಎನ್‌ಯುಎಸ್‌ಯು

ಹೊಸದಿಲ್ಲಿ,ಜ.10: ಕುಲಪತಿ ಎಂ.ಜಗದೀಶ್ ಕುಮಾರ ಅವರನ್ನು ವಜಾಗೊಳಿಸಬೇಕೆಂಬ ತನ್ನ ಬೇಡಿಕೆಗೆ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ (ಎಸ್‌ಯು)ವು ಅಂಟಿಕೊಂಡಿದೆ,ಆದರೆ ಶುಲ್ಕ ಹೆಚ್ಚಳದ ವಿರುದ್ಧ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಬೇಕೇ ಎನ್ನುವುದನ್ನು ನಂತರ ನಿರ್ಧರಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷೆ ಐಷೆ ಘೋಷ್ ಅವರು ಶುಕ್ರವಾರ ಇಲ್ಲಿ ತಿಳಿಸಿದರು.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳು ಮತ್ತು ವಿವಿಯ ಶಿಸ್ತುಪಾಲನಾ ವಿಭಾಗವು ಆರಂಭಿಸಿರುವ ತನಿಖೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಧ್ಯಪ್ರವೇಶವನ್ನು ಒಕ್ಕೂಟವು ಕೋರಿದೆ ಎಂದೂ ಹೇಳಿದರು.
ಜೆಎನ್‌ಯು ಕುಲಪತಿ ರಾಜೀನಾಮೆ ನೀಡಬೇಕೆಂಬ ಬೇಡಿಕೆಯಲ್ಲಿ ಬದಲಾವಣೆಯಿಲ್ಲ. ಒಕ್ಕೂಟದ ಸಲಹೆಗಾರರು ಮತ್ತು ಪದಾಧಿಕಾರಿಗಳ ಸಭೆಯನ್ನು ಕರೆದು ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಬೇಕೇ ಎಂಬ ಬಗ್ಗೆ ನಿರ್ಧರಿಸಲಾಗುವುದು. ನಮ್ಮ ವಾದವನ್ನು ಮಂಡಿಸಿದ್ದೇವೆ,ಸಚಿವಾಲಯದ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದು ಘೋಷ್ ತಿಳಿಸಿದರು.





