ಅಮಿತ್ ಶಾ ಸಿಎಎ ಬದಲಾಗಿ ಮಹಾದಾಯಿ ಕುರಿತು ಮಾತನಾಡಲಿ: ಕುಮಾರಸ್ವಾಮಿ

ಬೆಂಗಳೂರು, ಜ.10: ಕೇಂದ್ರದ ಗೃಹ ಸಚಿವ ಅಮಿತ್ ಶಾ ಜ.19ರಂದು ಸಿಎಎ ಕುರಿತು ಮಾತನಾಡಲು ಹುಬ್ಬಳ್ಳಿಗೆ ಬರುತ್ತಿದ್ದಾರೆ. ಅವರನ್ನು ಸಿಎಎ ಬದಲಾಗಿ, ಮಹಾದಾಯಿ ಕುರಿತು ಮಾತನಾಡುವಂತೆ ರಾಜ್ಯದ ಜನತೆ ಒತ್ತಾಯಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಅಮಿತ್ ಶಾ ಜನವಿರೋಧಿ ಕಾಯ್ದೆ ಸಿಎಎ ಕುರಿತು ಮಾತನಾಡುವ ಮೂಲಕ ಜನರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುವುದಕ್ಕೆ ಯಾರೂ ಅವಕಾಶ ಮಾಡಿಕೊಡಬಾರದು. ಅದರ ಬದಲಿಗೆ ರೈತರ ಬದುಕಿಗೆ ಆಶಾಕಿರಣವಾಗಿರುವ ಮಹಾದಾಯಿ ನೀರು ಹಂಚಿಕೆ ಕುರಿತು ಮಾತನಾಡಲಿ ಎಂದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ರಾಜಕೀಯ ತೆವಲುಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಬಿಜೆಪಿ ವರಿಷ್ಠರ ಜೋತೆ ಮಾತನಾಡಲು ದೆಹಲಿಗೆ ಹೋಗುವುದನ್ನು ನಿಲ್ಲಿಸಲಿ. ಬದಲಿಗೆ, ನೆರೆ ಅನುದಾನ, ಮಹಾದಾಯಿ ಸೇರಿದಂತೆ ರಾಜ್ಯದಲ್ಲಿ ತಲೆದೋರಿರುವ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ವರಿಷ್ಠರನ್ನು ಭೇಟಿ ಮಾಡಿ ಚರ್ಚಿಸಲಿ ಎಂದು ಅವರು ಹೇಳಿದ್ದಾರೆ.





