ಕರ್ನಾಟಕ ಕರಾವಳಿ ಆದರಾತಿಥ್ಯಕ್ಕೆ ಹೊಸ ಸೇರ್ಪಡೆ: ಲಿಗಾಡೋ ಹೊಟೇಲ್, ಕನ್ವೆಂಶನ್ ಸೆಂಟರ್

ಉಡುಪಿ, ಜ.10: ಆದರಾತಿಥ್ಯಕ್ಕೆ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಕರಾವಳಿ ಕರ್ನಾಟಕಕ್ಕೆ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲೇ ಆದಿ ಉಡುಪಿ ಕರಾವಳಿ ಜಂಕ್ಷನ್ ಬಳಿ ತಲೆ ಎತ್ತಿ ನಿಂತಿರುವ ಬಹು ಅಂತಸ್ತಿನ ಲಿಗಾಡೋ ಹೊಟೇಲ್ ಮತ್ತು ಕನ್ವೆಂಶನ್ ಸೆಂಟರ್ ಹೊಸ ಸೇರ್ಪಡೆಯಾಗಿದೆ.
ಭೋಜನ, ಮನೋರಂಜನೆ ಹಾಗೂ ಆತಿಥ್ಯದ ವಿಸ್ತೃತ ಆಯ್ಕೆಗಳಿಗೆ ಇಲ್ಲಿ ವಿಪುಲ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ಹೊಟೇಲ್‌ನ ಆಡಳಿತ ನಿರ್ದೇಶಕ ಗಂಗೊಳ್ಳಿಯ ಮೌಲಾನಾ ಇಬ್ರಾಹೀಂ ತಿಳಿಸಿದ್ದಾರೆ.
ಹೊಟೇಲ್‌ನ ಬೋರ್ಡ್‌ರೂಮಿನಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಹೊಟೇಲ್‌ನ ವೈಶಿಷ್ಟಗಳನ್ನು ತೆರೆದಿಟ್ಟರು. ಪ್ರಾಕೃತಿಕ ಸೌಂದರ್ಯ ಪರಿಸರದಲ್ಲಿ ಎಂಟು ಅಂತಸ್ತುಗಳಲ್ಲಿ ವಿಸ್ತರಿಸಿರುವ ಲಿಗಾಡೋ ಹೊಟೇಲ್ ಮತ್ತು ಕನ್ವೆಂಶನ್ ಸೆಂಟರ್‌ನಲ್ಲಿ ಎಲ್ಲಾ ಬಗೆಯ, ಗಾತ್ರದ ಸಭೆ, ಸಮಾರಂಭ, ಕಾರ್ಯಕ್ರಮಗಳಿಗೆ ಹಾಗೂ ಎಲ್ಲಾ ರೀತಿಯ ಅತಿಥಿ-ಸಮೂಹಗಳಿಗೆ ಸರಿ ಹೊಂದುವ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದವರು ತಿಳಿಸಿದರು.
ಲಿಗಾಡೋ ಹೊಟೇಲ್ ಐದು ಬಗೆಯ ಬ್ಯಾಂಕ್ವೆಟ್ ಹಾಲ್‌ಗಳನ್ನು ಹಾಗೂ ಕನ್ವೆಂಶನ್ ಸೆಂಟರ್‌ಗಳನ್ನು ಹೊಂದಿದೆ. ಸುಮಾರು 50 ಜನರಿಂದ ಹಿಡಿದು 2000ಕ್ಕೂ ಅಧಿಕ ಅತಿಥಿಗಳಿಗೆ ಆದರಾತಿಥ್ಯ ನೀಡುವ ಅವಕಾಶ ಇಲ್ಲಿದೆ. ಇಲ್ಲಿ ಒಟ್ಟು ಆರು ರೆಸ್ಟೋರೆಂಟ್ ಗಳಿವೆ. ಇವುಗಳಲ್ಲಿ ಪ್ರತ್ಯೇಕ ವ್ಯವಸ್ಥೆಯೊಂದಿಗೆ ಎರಡು ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್‌ಗಳೂ ಸೇರಿವೆ. ಇಲ್ಲಿ 30 ಸೂಪರ್ ಡೀಲಕ್ಸ್ ರೂಮುಗಳಿದ್ದು, ನಾಲ್ಕು ಸೂಟ್‌ಗಳನ್ನು ಹೊಂದಿದೆ. ಆಯ್ಕೆಗೆ ಅವಕಾಶವಿರುವಂತೆ ವೈವಿಧ್ಯಮಯ ಆಹಾರ, ಅಡುಗೆ ಇಲ್ಲಿ ಲಭ್ಯವಿದೆ ಎಂದರು.
ಹೊಟೇಲ್‌ನ್ನು ಅತ್ಯಾಕರ್ಷಕ ಹಾಗೂ ಕಲಾತ್ಮಕವಾದ ಆಧುನಿಕ ಹಾಗೂ ಸಾಂಪ್ರದಾಯಿಕ ಒಳಾಲಂಕಾರಗಳಿಂದ ಸಜ್ಜುಗೊಳಿಸ ಲಾಗಿದೆ. ಇಲ್ಲಿರುವ ಪ್ರತಿಯೊಂದು ರೆಸ್ಟೋರೆಂಟ್‌ಗಳು, ಬ್ಯಾಂಕ್ವೆಟ್ ಹಾಲ್‌ಗಳು ವಿಭಿನ್ನ ಅನುಭವ ಗಳನ್ನು ನೀಡುವಂತೆ ರೂಪಿಸ ಲಾಗಿದ್ದು, ನಿಮ್ಮನ್ನು ಹೊಸ ಲೋಕಕ್ಕೆ ಕರೆದೊಯ್ಯುವ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ ಎಂದರು.
ಈಗಾಗಲೇ ಉದ್ಘಾಟನೆಗೊಂಡಿರುವ ಲಿಗಾಡೋ ಹೊಟೇಲ್ ಒಂದು ವಾರದೊಳಗೆ ಸರ್ವ ರೀತಿಯಲ್ಲೂ ಸಜ್ಜುಗೊಂಡು ಗ್ರಾಹಕರ ಸೇವೆಗೆ ಸಿದ್ಧವಾಗಲಿದೆ. ನಾಲ್ಕನೇ ಅಂತಸ್ತಿನಿಂದ ರೂಮುಗಳಿದ್ದು, ಪ್ರವಾಸಿಗರಿಗೆ ಹೊಸ ಅನುಭವ ನೀಡುವಂತೆ ಅವುಗಳನ್ನು ರೂಪಿಸಲಾಗಿದೆ. ಈಗಾಗಲೇ ಶುದ್ಧ ಶಾಕಾಹಾರದ ‘ಉಡುಪಿ ರಸೋಯಿ’ ಹಾಗೂ ಮಾಂಸಾಹಾರದ ‘ಫಿಶ್ ಎನ್ ರೈಸ್’ ಕಾರ್ಯಾರಂಭಿಸಿವೆ.
ನೆಲ ಮಹಡಿಯಲ್ಲಿರುವ ಉಡುಪಿ ರಸೋಯಿ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್. ಇದು ತನ್ನದೇ ಆದ ಪ್ರತ್ಯೇಕ ಅಡುಗೆ ಮನೆಯನ್ನು ಹೊಂದಿದೆ. ದಕ್ಷಿಣ ಭಾರತೀಯ ಶೈಲಿಯ ವಿಶಿಷ್ಟ ಖಾದ್ಯಗಳೊಂದಿಗೆ ಉತ್ತರ ಭಾರತ ಶೈಲಿಯ ಊಟ-ಉಪಹಾರವೂ ಲಭ್ಯವಿದೆ. ಕರಾವಳಿ ಕರ್ನಾಟಕದ ಶಿಲ್ಪಕಲಾ ವೈಭವ ವನ್ನು ಸಾರುವ ಶಿಲಾ ಮಂಟಪವಿರುವ ಇಲ್ಲಿ ಕೇವಲ 65 ರೂ.ಗಳಿಗೆ ದಕ್ಷಿಣ ಭಾರತೀಯ ಥಾಲಿ ಊಟ ಲಭಿಸುತ್ತದೆ ಎಂದು ಹೊಟೇಲ್‌ನ ಜನರಲ್ ಮ್ಯಾನೇಜರ್ ರಣ್‌ವಿಜಯ್ ಸಿಂಗ್ ತಿಳಿಸಿದರು.
ಮೊದಲ ಅಂತಸ್ತಿನಲ್ಲಿರುವ ಫಿಶ್ ಎನ್ ರೈಸ್ ಕೆಂಪು ಇಟ್ಟಿಗೆಗಳಿಂದ ವಿನ್ಯಾಸಗೊಳಿಸಲಾದ ರೆಸ್ಟೆರೋ ಆಗಿದ್ದು, ಕುಟುಂಬ ಸ್ನೇಹಿ ವಾತಾವರಣದಲ್ಲಿ ಕರಾವಳಿಯ ವೈವಿಧ್ಯಮಯ ಹಾಗೂ ಸ್ವಾದಿಷ್ಟ ಖಾದ್ಯಗಳನ್ನು ಇಲ್ಲಿ ಸವಿಯಬಹುದಾಗಿದೆ ಎಂದರು.
ಮೊಗಲ್ ಹಾಗೂ ರಜಪೂತ ಸಂಸ್ಕೃತಿಯಿಂದ ಪ್ರಭಾವಿತವಾದ ಪಾರಂಪರಿಕ ಹಾಗೂ ಕಲಾತ್ಮಕ ರೀತಿಯಲ್ಲಿ ಸಜ್ಜುಗೊಳಿಸಿರುವ ‘ವಿರಾಸತ್’ ರೆಸ್ಟೋರೆಂಟ್‌ನಲ್ಲಿ ಕಲಾತ್ಮಕವಾದ ಕರಕುಶಲ ವಸ್ತುಗಳ ಪ್ರದರ್ಶನವಿದೆ. ಮಜ್ಲಿಸ್ ಹಾಗೂ ಬೈಠಕ್ ಸ್ಥಳ ಇಲ್ಲಿನ ಇನ್ನೊಂದು ವಿಶೇಷತೆ. ಇಲ್ಲಿ ಅತಿಥಿಗಳಿಗೆ ಭೋಜನಕ್ಕೆ ಕುಳಿತುಕೊಳ್ಳಲು ತಗ್ಗು ಆಸನಗಳ ಸೋಫಾ ಇವೆ. ಇವುಗಳಲ್ಲಿ ಅತಿಥಿಗಳು ಸಾಂಪ್ರದಾಯಿಕ ರೀತಿಯಲ್ಲಿ ಚಕ್ಕಳ-ಮಕ್ಕಳ ರೀತಿಯಲ್ಲಿ ಕುಳಿತುಕೊಳ್ಳಬಹುದಾಗಿದೆ.
66 ಕಾಸಾ ಬೊನಿಟಾ ದಿನವಿಡೀ ತೆರೆದಿರುವ ಫುಡ್‌ಕೋರ್ಟ್ ಆಗಿದ್ದು, ಐರೋಪ್ಯ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಪಿಝಾದಿಂದ ಐಸ್‌ಕ್ರೀಮ್‌ವರೆಗೆ ಇಲ್ಲಿ ವೈವಿಧ್ಯಮಯ ಸ್ವಾಧಿಷ್ಟ ಖಾದ್ಯಗಳು ಲಭ್ಯವಿರಲಿದೆ. ಎಮಿಗೋ ಉಡುಪಿಯ ಮೊತ್ತಮೊದಲ ಡ್ರೈವ್ ಇನ್ ರೆಸ್ಟೋರೆಂಟ್ ಆಗಿದೆ ಎಂದು ಮೌಲಾನ ಇಬ್ರಾಹೀಂ ವಿವರಿಸಿದರು.
ಹೊಟೇಲ್‌ನ ಎಂಟನೇ ಮಹಡಿಯಲ್ಲಿರುವ ವೈಭವೋಪೇತ ಹಾಗೂ ಐಷಾರಾಮಿ ಕನ್ವೆಂಷನ್ ಸೆಂಟರ್ ‘ಗ್ರಾಂಡ್ ಮಿಲೇನಿಯಮ್’. ಇಲ್ಲಿ ಒಂದು ಸಾವಿರದಿಂದ 3000ದವರೆಗೆ ಅತಿಥಿಗಳು ಭಾಗವಹಿಸಬಹುದಾಗಿದ್ದು, ಚಿತ್ತಾಕರ್ಷಕ, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಇದು ಗ್ರಾಹಕನಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ. ಇದಕ್ಕಾಗಿ ಏಳನೇ ಅಂತಸ್ತಿನಲ್ಲಿ ಪ್ರತ್ಯೇಕ ಡೈನಿಂಗ್ ಹಾಲನ್ನು ಹೊಂದಿದೆ ಎಂದರು.
ಅದೇ ರೀತಿ 1000ರಿಂದ 1500 ಅತಿಥಿಗಳ ಸಮಾವೇಶಕ್ಕೆ ‘ಸಮ್ಮೇಳನ’ ಬ್ಯಾಂಕ್ವೆಟ್ ಹಾಲ್, ಪಾರ್ಟಿ ಹಾಗೂ ಕಾರ್ಪೋರೇಟ್ ಕಾರ್ಯಕ್ರಮಗಳಿಗೆ 200ರಿಂದ 250 ಸಾಮರ್ಥ್ಯದ ‘ಝೀಹಾ’ ಬ್ಯಾಂಕ್ವೆಟ್ ಹಾಲ್, 80ರಿಂದ 100 ಮಂದಿ ಗ್ರಾಹಕರ ಸಾಮರ್ಥ್ಯವಿರುವ ‘ಸಿಂಡ್ರೆಲ್ಲಾ’ ಮಹಿಳೆಯರನ್ನು ಗಮನದಲ್ಲಿರಿಸಿಕೊಂಡು ಅದ್ಭುತ ಮತ್ತು ಅತ್ಯಾಕರ್ಷಕ ಒಳಾಂಗಣ ಡಿಸೈನ್ ಹಾಗೂ ಸೆಟ್ಟಿಂಗ್ ಹೊಂದಿದೆ.
ಇದರೊಂದಿಗೆ ಹೊಟೇಲ್ 30,000 ಚದರ ಅಡಿ ವಿಸ್ತೀರ್ಣದಲ್ಲಿ ತನ್ನದೇ ಆದ ಪ್ರತ್ಯೇಕ ಹಾಗೂ ಸುವಿಶಾಲ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ 150ಕ್ಕೂ ಅಧಿಕ ಕಾರು ಹಾಗೂ 100ಕ್ಕೂ ಅಧಿಕ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶವಿದೆ ಎಂದು ಹೊಟೇಲ್‌ನ ಕಾರ್ಯನಿರ್ವಾಹಕ ನಿರ್ದೇಶಕ, ಕರಾವಳಿಯ ಹೊಟೇಲ್ ಉದ್ಯಮದಲ್ಲಿ ದಶಕಗಳಿಗೂ ಅಧಿಕ ಅನುಭವವಿ ರುವ ಬಿಜು ವರ್ಗೀಸ್ ತಿಳಿಸಿದರು.
‘ಗಂಗೊಳ್ಳಿಯ ಬಡ ಕುಟುಂಬದಿಂದ ಬಂದು ಎಲ್ಲಾ ಕಷ್ಟಗಳನ್ನು ಅನುಭವಿಸಿ ಸ್ವಪ್ರಯತ್ನದಿಂದ ಮೇಲಕ್ಕೆ ಬಂದಿರುವ ತಾನು ಯಾವುದೇ ಜಾತಿ, ಮತ, ಧರ್ಮ, ಬಡವ ಮತ್ತು ಶ್ರೀಮಂತ ಎಂಬ ಭೇದವಿಲ್ಲದೇ ಎಲ್ಲರನ್ನೂ ದೃಷ್ಟಿಯಲ್ಲಿಟ್ಟು ಈ ಸಾಹಸಕ್ಕೆ ಮುಂದಾಗಿದ್ದೇನೆ. ನಾನು ಎಲ್ಲಾ ಧರ್ಮಗಳನ್ನು ಸಮಾನವಾಗಿ ನೋಡುತ್ತೇನೆ. ಪೇಜಾವರಶ್ರೀಗಳೂ ಇಲ್ಲಿಗೆ ಬಂದು ತನ್ನನ್ನು ಆಶೀರ್ವದಿಸಿದ್ದಾರೆ.’ ಎಂದು ಮೌಲಾನ ಇಬ್ರಾಹೀಂ ನುಡಿದರು.
ಗೋವಾದಲ್ಲಿ ಮತ್ಸೋದ್ಯಮಿಯಾಗಿರುವ ತಾನು ‘ಉಡುಪಿ ಬ್ರಾಂಡ್’ನ್ನು ಪ್ರಸಿದ್ಧಿಗೊಳಿಸಲು ಬಯಸಿದ್ದು, ಶೀಘ್ರವೇ ಉತ್ತರ ಕನ್ನಡದ ಮುರ್ಡೇಶ್ವರದಲ್ಲಿ ಇದೇ ಮಾದರಿಯ ಹೊಟೇಲ್ ಉದ್ಘಾಟನೆಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೊಟೇಲ್‌ನ ಇಡಿ ಬಿಜು ವರ್ಗೀಸ್, ಆರ್ಕಿಟೆಕ್ಟ್ ಭಗವಾನ್‌ದಾಸ್, ಮುಖ್ಯ ಚೆಫ್ ಬಂಬಾ ಉಪಸ್ಥಿತರಿದ್ದರು.
















