ಮಂಗಳೂರು ವಿವಿ ಖಾಲಿ ಹುದ್ದೆಗೆ ಫೆಬ್ರವರಿಯೊಳಗೆ ಭರ್ತಿ: ವಿವಿ ಕುಲಪತಿ
ಮಂಗಳೂರು, ಜ.10: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಫೆಬ್ರವರಿಯೊಳಗೆ ಸರಕಾರದಿಂದ ಅನುಮತಿ ದೊರಕುವ ನಿರೀಕ್ಷೆ ಇದೆ ಎಂದು ವಿವಿ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.
ಮಂಗಳೂರಿನ ವಿವಿ ಕಾಲೇಜಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಯಲ್ಲಿ 124 ಬೋಧಕ ಹಾಗೂ 215 ಬೋಧಕೇತರ ಸಿಬ್ಬಂದಿಯ ಕೊರತೆ ಇದೆ. ಈ ಹುದ್ದೆ ಭರ್ತಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಯುಜಿಪಿಯ ನ್ಯಾಕ್ ಮೌಲ್ಯಮಾಪನ ದೃಷ್ಟಿಯಿಂದಲೂ ಖಾಲಿ ಹುದ್ದೆಯನ್ನು ಭರ್ತಿಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದರು.
ವಿವಿಯಲ್ಲಿ 25 ವಿಭಾಗಗಳಿದ್ದು, 45 ವಿಷಯಗಳನ್ನು ಬೋಧಿಸಲಾಗುತ್ತಿದೆ. ಮೂರನೇ ಒಂದಂಶ ಖಾಲಿ ಇರುವ ಹುದ್ದೆಯನ್ನು ಭರ್ತಿಗೊಳಿಸಲು ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಖಾಲಿ ಹುದ್ದೆಯನ್ನು ಕೆಇಎ ಮೂಲಕ ತುಂಬುವ ಬದಲು ವಿವಿ ಮೂಲಕ ಭರ್ತಿಗೆ ಅವಕಾಶ ನೀಡುವಂತೆ ಕೋರಲಾಗಿದೆ. ಕಳೆದ 10 ವರ್ಷಗಳಿಂದ ಯಾವುದೇ ನೇಮಕ ನಡೆದಿಲ್ಲ ಎಂದು ಕುಲಪತಿ ಪಿ.ಎಸ್.ಯಡಪಡಿತ್ತಾಯ ನುಡಿದರು.
ವಿವಿ ಪತ್ರಿಕೋದ್ಯಮ ವಿಭಾಗದಲ್ಲಿ ಕೂಡ ಖಾಲಿ ಹುದ್ದೆ ಇದ್ದು, ಪ್ರಸಕ್ತ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಖ್ಯಾಶಾಸ್ತ್ರ ವಿಭಾಗದಲ್ಲಿ ಎಲ್ಲ ಹುದ್ದೆಗಳೂ ಖಾಲಿಯಾಗಿವೆ. ಕಳೆದ ಬಾರಿ ಹೈದರಾಬಾದ್ ಕರ್ನಾಟಕ ಮೀಸಲು ಕಾರಣಕ್ಕೆ ಯಾವುದೇ ನೇಮಕಾತಿ ಸಾಧ್ಯವಾಗಿಲ್ಲ. ಈ ಬಾರಿ ಎಲ್ಲ ಖಾಲಿ ಹುದ್ದೆಗಳ ಭರ್ತಿ ನಡೆಯುವ ವಿಶ್ವಾಸವಿದೆ ಎಂದರು.







