ಜ.12ರಂದು ನಾರಾಯಣ ಗುರು ಅಧ್ಯಯನ ಪೀಠದ ಕಟ್ಟಡಕ್ಕೆ ಶಿಲಾನ್ಯಾಸ
ಮಂಗಳೂರು, ಜ.10: ಮಂಗಳೂರು ವಿವಿ ಕ್ಯಾಂಪಸ್‌ನ ಒಂದು ಎಕರೆ ಪ್ರದೇಶದಲ್ಲಿ ಸುಮಾರು 3.50 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನಾರಾಯಣ ಗುರು ಅಧ್ಯಯನ ಪೀಠದ ಕಟ್ಟಡಕ್ಕೆ ಜ.12ರಂದು ಶಿಲಾನ್ಯಾಸ ನೆರವೇರಲಿದೆ ಎಂದು ವಿವಿ ಕುಲಪತಿ ಪ್ರೊ.ಯಡಪಡಿತ್ತಾಯ ಹೇಳಿದರು.
ಮಂಗಳೂರಿನ ವಿವಿ ಕಾಲೇಜಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಂದು ಬೆಳಗ್ಗೆ 10:30ಕ್ಕೆ ಶಿಲಾನ್ಯಾಸ ನೆರವೇರಿಸುವರು. ಬಳಿಕ ಮಂಗಳಾ ಸಭಾಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಯು.ಟಿ. ಖಾದರ್, ಹರೀಶ್ ಕುಮಾರ್, ಮಾತೃಭೂಮಿ ದೈನಿಕದ ನಿರ್ವಾಹಕ ಸಂಪಾದಕ ಪಿ.ವಿ.ಚಂದ್ರನ್ ಅತಿಥಿಗಳಾಗಿ ಭಾಗವಹಿಸುವರು ಎಂದರು.
ವಿವಿ ಮುಖ್ಯದ್ವಾರಕ್ಕಿಂತ ಮುಂದೆ ಕೆಪಿಎ ಕಟ್ಟಡ ಬಳಿಯ ನಿವೇಶನದಲ್ಲಿ ನಿರ್ಮಾಣವಾಗುವ ನಾರಾಯಣಗುರು ಅಧ್ಯಯನ ಪೀಠದ ಬಳಿಯೇ ಒಟ್ಟು 19 ಪೀಠಗಳು ಕಾರ್ಯನಿರ್ವಹಿಸಲಿದೆ. ನಾರಾಯಣಗುರು ಪೀಠದಲ್ಲಿ ಸೆಮಿನಾರ್ ಹಾಲ್, ಜ್ಞಾನಮಂದಿರ, ಗ್ರಂಥಾಲಯ, ವಸ್ತು ಸಂಗ್ರಹಾಲಯ, ಸಂಶೋಧನಾ ವಿಭಾಗ, ಕಲಾಪ್ರದರ್ಶನ ವೇದಿಕೆ, ಕಚೇರಿ ಸಹಿತ ಅಧ್ಯಯನಕ್ಕೆ ಬೇಕಾಗುವ ಸವಲತ್ತುಗಳನ್ನು ಅಳವಡಿಸಿಕೊಳ್ಳುವ ಯೋಜನೆ ಇದೆ. ಅಲ್ಲದೆ ನಾರಾಯಣಗುರುಗಳ ಪ್ರತಿಮೆಯೂ ಸ್ಥಾಪನೆಯಾಗಲಿದೆ. ಈಗಾಗಲೇ 50 ಲಕ್ಷ ರು. ಅನುದಾನ ಬಿಡುಗಡೆಗೊಂಡಿದೆ. ಉಳಿದ ಮೊತ್ತವನ್ನು ಸಲಹಾ ಸಮಿತಿ ರಚಿಸಿ ಆದಷ್ಟು ಶೀಘ್ರ ಕ್ರೋಢೀಕರಿಸಲಾಗುವುದು. ಮೂರು ಅಂತಸ್ತುಗಳ ಈ ಕಟ್ಟಡ ಎರಡು ವರ್ಷದಲ್ಲಿ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ, ಪೀಠದ ಸಲಹಾ ಮಂಡಳಿ ಸದಸ್ಯರಾದ ಮೋಹನ್ ಚಂದ್ರನ್ ನಂಬಿಯಾರ್, ಪಿ.ವಿ.ಮೋಹನ್, ಕಾಲೇಜಿನ ಪ್ರಾಂಶುಪಾಲ ಪ್ರೊ. ಉದಯ ಕುಮಾರ್ ಇರ್ವತ್ತೂರು ಉಪಸ್ಥಿತರಿದ್ದರು.







