ಕಾಶ್ಮೀರದ ಸೌಂದರ್ಯವನ್ನು ಬಣ್ಣಿಸಲು ಡಿಕನ್ಸ್‌ನ ಕಾದಂಬರಿಯ ಸಾಲು ಉಲ್ಲೇಖಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಜ.10: ಭೂಲೋಕದ ಸ್ವರ್ಗ ಎಂದು ಬಣ್ಣಿಸಲ್ಪಡುವ ಕಾಶ್ಮೀರದ ಸೌಂದರ್ಯವನ್ನು ಉಲ್ಲೇಖಿಸುವ ಸಂದರ್ಭ ನ್ಯಾಯಮೂರ್ತಿ ಎನ್ ವಿ ರಮಣ ಚಾರ್ಲ್ಸ್ ಡಿಕನ್ಸ್‌ನ ‘ಎ ಟೇಲ್ ಆಫ್ ಟು ಸಿಟೀಸ್’ ಎಂಬ ಪ್ರಸಿದ್ಧ ಕಾದಂಬರಿಯ ಆರಂಭಿಕ ಸಾಲುಗಳನ್ನು ಉದಾಹರಿಸಿದರು.
ಆ ಸಾಲು ಹೀಗಿದೆ:
ಅದು ಅತ್ಯುತ್ತಮ ಸಮಯವಾಗಿತ್ತು, ಅದು ಅತ್ಯಂತ ಕೆಟ್ಟ ಸಮಯವಾಗಿತ್ತು,
ಅದು ಬುದ್ಧಿವಂತಿಕೆಯ ಯುಗವಾಗಿತ್ತು, ಅದು ಮೂರ್ಖತನದ ಯುಗವಾಗಿತ್ತು,
ಅದು ನಂಬಿಕೆಯ ಯುಗವಾಗಿತ್ತು, ಅದು ನಂಬಲಾಗದ ಯುಗವಾಗಿತ್ತು,
ಅದು ಬೆಳಕಿನ ಕಾಲವಾಗಿತ್ತು, ಅದು ಕತ್ತಲೆಯ ಕಾಲವಾಗಿತ್ತು,
ಅದು ಭರವಸೆಗಳ ವಸಂತವಾಗಿತ್ತು, ಅದು ಹತಾಶೆಯ ಚಳಿಗಾಲವಾಗಿತ್ತು,
ನಮ್ಮ ಮುಂದೆ ಎಲ್ಲವೂ ಇತ್ತು, ನಮ್ಮ ಮುಂದೆ ಏನೂ ಇರಲಿಲ್ಲ,
ನಾವೆಲ್ಲರೂ ನೇರವಾಗಿ ಸ್ವರ್ಗಕ್ಕೆ ಹೋಗುತ್ತಿದ್ದೇವೆ, ನಾವೆಲ್ಲರೂ ನೇರವಾಗಿ ಬೇರೆ ದಾರಿಯಲ್ಲಿ ಹೋಗುತ್ತಿದ್ದೇವೆ.
‘‘ಸಂಕ್ಷಿಪ್ತವಾಗಿ ಹೇಳುವುದಾದರೆ - ಕೆಲವರು ಈ ಕಾಲ ಅತ್ಯುತ್ತಮ ಎಂದು ವಿಮರ್ಶಿಸಿದರೆ ಕೆಲವರು ಈ ಕಾಲ ಅತ್ಯಂತ ಕೆಟ್ಟ ಕಾಲ ಎಂದು ಟೀಕಿಸುತ್ತಿದ್ದಾರೆ’’ - ಎಂಬ ಡಿಕನ್ಸ್‌ನ ಪ್ರಸಿದ್ಧ ಉಕ್ತಿಯನ್ನು ನ್ಯಾಯಾಧೀಶರು ಉಲ್ಲೇಖಿಸಿದರು. ನಮ್ಮ ಹೃದಯದಲ್ಲಿ ಭೂಲೋಕದ ಸ್ವರ್ಗ ಎಂದು ಸ್ಮರಿಸಿಕೊಳ್ಳುವ ಈ ಸುಂದರ ಭೂಮಿಯ ಇತಿಹಾಸ ಹಿಂಸಾಚಾರ ಮತ್ತು ಆತಂಕವಾದದಿಂದ ಕೂಡಿದೆ. ಹಿಮಾಲಯ ಪರ್ವತ ಶಾಂತತೆಯ ಪ್ರತೀಕವಾಗಿದ್ದರೂ ಪ್ರತೀದಿನ ರಕ್ತಪಾತವಾಗಿದೆ. ಅಂತರ್ಗತ ವಿರೋಧಾಭಾಸದ ಈ ಭೂಮಿಯಲ್ಲಿ ಇಬ್ಬರು ಅರ್ಜಿದಾರರು ಸಂಪೂರ್ಣ ವಿರುದ್ಧವಾದ ಮತ್ತು ವಾಸ್ತವವಾಗಿ ಹೊಂದಾಣಿಕೆಯಾಗದ ಎರಡು ವಿಭಿನ್ನ ಚಿತ್ರಗಳನ್ನು ಪ್ರಸ್ತುತಪಡಿಸಿದ್ದಾರೆ ಎಂದು ನ್ಯಾಯಾಧೀಶರು ಹೇಳಿದರು.







