ದೇಶದಲ್ಲಿ ಪ್ರತೀದಿನ 89 ಅತ್ಯಾಚಾರ ಪ್ರಕರಣ ದಾಖಲು

ಹೊಸದಿಲ್ಲಿ, ಜ.10: ದೇಶದಲ್ಲಿ ಪ್ರತೀದಿನ ಸರಾಸರಿ 89 ಅತ್ಯಾಚಾರ ಪ್ರಕರಣ ದಾಖಲಾಗುತ್ತಿದ್ದು ಪ್ರತೀ ನಾಲ್ಕು ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತ ವಯಸ್ಕನಾಗಿದ್ದಾನೆ ಎಂದು ಎನ್‌ಸಿಆರ್‌ಬಿ ವರದಿ ತಿಳಿಸಿದೆ.
ಪ್ರತೀ ನಾಲ್ಕು ಆರೋಪಿಗಳಲ್ಲಿ ಓರ್ವ ಅಪ್ರಾಪ್ತ ವಯಸ್ಕನಾಗಿದ್ದರೆ, 50%ದಷ್ಟು ಆರೋಪಿಗಳು 18ರಿಂದ 30 ವರ್ಷದವರು. 94% ಪ್ರಕರಣಗಳಲ್ಲಿ ಅತ್ಯಾಚಾರ ಎಸಗಿದವರು ಅತ್ಯಾಚಾರ ಸಂತ್ರಸ್ತೆಯ ಪರಿಚಯಸ್ತರೇ ಆಗಿದ್ದಾರೆ (ಕುಟುಂಬದ ಸದಸ್ಯರು, ಸ್ನೇಹಿತರು, ಲಿವ್ ಇನ್ ಸಂಬಂಧದಲ್ಲಿದ್ದವರು, ಉದ್ಯೋಗದಾತರು ಇತ್ಯಾದಿ) ಎಂದು ವರದಿ ತಿಳಿಸಿದೆ.
2018ರಲ್ಲಿ 33,356 ಅತ್ಯಾಚಾರ ಪ್ರಕರಣ ದಾಖಲಾಗಿದ್ದು ಪ್ರತೀ ದಿನ ಸರಾಸರಿ 89 ಪ್ರಕರಣ ದಾಖಲಾಗಿದೆ. ಸಂತ್ರಸ್ತರಲ್ಲಿ 72.2% ಮಹಿಳೆಯರು 18 ವರ್ಷಕ್ಕಿಂತ ಮೇಲಿನವರಾಗಿದ್ದರೆ 27.8% ಮಹಿಳೆಯರು 18 ವರ್ಷಕ್ಕಿಂತ ಕೆಳಹರೆಯದವರು. 2018ರಲ್ಲಿ ಅತ್ಯಾಚಾರ ಸಂತ್ರಸ್ತರಲ್ಲಿ 18% ಮಹಿಳೆಯರು 18ರಿಂದ 30 ವರ್ಷದೊಳಗಿನವರು, 18% ಸಂತ್ರಸ್ತರು 30ಕ್ಕಿಂತ ಹೆಚ್ಚು 45ಕ್ಕಿಂತ ಕೆಳಗಿನ ವರ್ಷದವರು, 2.1% ಮಹಿಳೆಯರು 45ರಿಂದ 60 ವರ್ಷದವರು, 0.2% ಮಹಿಳೆಯರು 60ಕ್ಕಿಂತ ಹೆಚ್ಚಿನ ವರ್ಷದವರು. ಇದೇ ರೀತಿ 16ರಿಂದ 18 ವರ್ಷದವರು 14.1%, 12ರಿಂದ 16 ವರ್ಷದವರು 10.6%, 6ರಿಂದ 12 ವರ್ಷದವರು 2.2%, 6 ವರ್ಷಕ್ಕಿಂತ ಕೆಳಗಿನವರು 0.8%. ಮಧ್ಯಪ್ರದೇಶದಲ್ಲಿ ಅತ್ಯಧಿಕ ಪ್ರಕರಣ (5,433) ದಾಖಲಾಗಿದ್ದರೆ ಆ ಬಳಿಕದ ಸ್ಥಾನದಲ್ಲಿ ರಾಜಸ್ತಾನ(4,335), ಉತ್ತರಪ್ರದೇಶ(3,946), ಮಹಾರಾಷ್ಟ್ರ (2,142), ಛತ್ತೀಸ್‌ಗಢ(2,091), ಕೇರಳ (1,945), ಅಸ್ಸಾಂ(1,648), ದಿಲ್ಲಿ(1,215), ಹರ್ಯಾಣ(1,296), ಜಾರ್ಖಂಡ್(1,090) ಮತ್ತು ಪಶ್ಚಿಮ ಬಂಗಾಳ(1,069) ರಾಜ್ಯಗಳಿವೆ.







