ಪೌರತ್ವ ಕಾಯ್ದೆ ಪ್ರತಿಭಟನೆ ಸಂದರ್ಭ ಹಿಂಸಾಚಾರ: 15 ಆರೋಪಿಗಳಿಗೆ ಜಾಮೀನು
ಹೊಸದಿಲ್ಲಿ, ಜ.10: ಪೌರತ್ವ ಕಾಯ್ದೆಯನ್ನು ವಿರೋಧಿಸಿ ಡಿಸೆಂಬರ್ 20ರಂದು ದರ್ಯಾಗಂಜ್‌ನಲ್ಲಿ ನಡೆದ ಪ್ರತಿಭಟನೆ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಬಂಧಿತರಾಗಿದ್ದ 15 ಅರೋಪಿಗಳಿಗೆ ದಿಲ್ಲಿಯ ತೀಸ್‌ಹಝಾರಿ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ತಲಾ 25000 ರೂ. ಮೊತ್ತದ ಬಾಂಡ್ ಮತ್ತು ಇಷ್ಟೇ ಮೊತ್ತದ ಜಾಮೀನು ಮುಚ್ಚಳಿಕೆ ಒದಗಿಸುವಂತೆ ನ್ಯಾಯಾಲಯ ಸೂಚಿಸಿದೆ. ಅಲ್ಲದೆ ಮುಂದಿನ ಆದೇಶದವರೆಗೆ ಒಂದು ತಿಂಗಳು ಪ್ರತೀ ಶನಿವಾರ ದರ್ಯಾಗಂಜ್ ಪೊಲೀಸ್ ಠಾಣಾಧಿಕಾರಿಯ ಎದುರು ಹಾಜರಾಗುವಂತೆ ಸೂಚಿಸಿದೆ.
ಆರೋಪಿಗಳು ಡಿಸೆಂಬರ್ 23ರಂದು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿದ ಬಳಿಕ ಆರೋಪಿಗಳಿಗೆ ಎರಡು ವಾರ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಸ್ವಯಂಪ್ರೇರಿತರಾಗಿ ತೊಂದರೆ ನೀಡಿರುವುದು, ನಾಶಗೊಳಿಸುವ ಉದ್ದೇಶದಿಂದ ಬೆಂಕಿ ಹಚ್ಚಿರುವುದು, ಕ್ರಿಮಿನಲ್ ಪಿತೂರಿ, ಸರಕಾರಿ ಸಿಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದು ಮತ್ತಿತರ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
Next Story







