ಜ. 19ರಂದು ನಾವೂರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಬ್ರಹ್ಮಕಲಶಾಭಿಷೇಕ

ಬಂಟ್ವಾಳ, ಜ. 10: ಸುಮಾರು 3.5 ಕೋಟಿ ವೆಚ್ಚದಲ್ಲಿ ಪುನರ್‍ನಿರ್ಮಾಣಗೊಂಡ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದಲ್ಲಿರುವ ಶ್ರೀ ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಜ. 16ರಂದು ನವೀಕರಣ ಪುನಃ ಪ್ರತಿಷ್ಠೆ ಮತ್ತು ಜ. 19ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ ತಿಳಿಸಿದ್ದಾರೆ.
ಅವರು ಶುಕ್ರವಾರ ನಾವೂರು ಸುಬ್ರಾಯ ನಾವೂರೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ.11ರಂದು ಶನಿವಾರ ಮಧ್ಯಾಹ್ನ 2ಗಂಟೆಗೆ ಬಿ.ಸಿ.ರೋಡಿನ ರಕ್ತೇಶ್ವರಿ ದೇವಿ ದೇವಸ್ಥಾನದ ಬಳಿಯಿಂದ ಹಸಿರು ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆ ಮೆರವಣಿಗೆ ನಡೆಯಲಿದ್ದು, ಬಂಟ್ವಾಳ ಪೇಟೆ, ಜಕ್ರಿಬೆಟ್ಟು, ಮಣಿಹಳ್ಳ ಮಾರ್ಗವಾಗಿ ಹೊರೆಕಾಣಿಕೆ ಮೆರವಣಿಗೆ ದೇವಸ್ಥಾನ ತಲುಪಲಿದೆ. ಜ.18ರಂದು ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.
ಜ.19ರಂದು ಬೆಳಿಗ್ಗೆ 5ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು ನಡೆದು ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಅದೇ ದಿನ ರಾತ್ರಿ 10ರಿಂದ ವ್ಯಾಘ್ರ ಚಾಮುಂಡಿ ಹಾಗೂ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ಜರಗಲಿದೆ. ಜ.19ರವರೆಗೆ ವಿವಿಧ ವೈದಿಕ, ತಾಂತ್ರಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಸರಕಾರದಿಂದ ಶ್ರೀ ನಾವೂರು ಕ್ಷೇತ್ರದ ಅಭಿವೃದ್ಧಿಗೆ 8 ಲಕ್ಷ ರೂ. ಬಿಡುಗುಡೆಗೊಂಡಿದೆ. ಬ್ರಹ್ಮಕಲಶೋತ್ಸವದಂದು ಸುಮಾರು ಐವತ್ತು ಸಾವಿರ ಭಕ್ತಾದಿಗಳು ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಆನಂದ ತೀರ್ಥ ಎನ್., ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಚಂದ್ರ ಭಟ್ ಅಗ್ರಹಾರ ಮಠ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮುರಳೀಧರ ಭಟ್ ಹಳೇಗೇಟು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾನಂದ ಗೌಡ ಹಳೆಗೇಟು, ಕಾರ್ಯದರ್ಶಿ ರಾಜೇಶ್ ನೆಕ್ಕರೆ, ಕೋಶಾಧಿಕಾರಿ ಗೋಪಾಲ ಸಪಲ್ಯ, ಪ್ರಚಾರ ಸಮಿತಿಯ ಸಂಚಾಲಕ ಹರೀರ್ಶ ಮೂಲ್ಯ ಮಲೆಬಾವು ಉಪಸ್ಥಿತರಿದ್ದರು.







